ಶಿಬಿರಗಳು ಕಡು, ಮಧ್ಯಮ ಮತ್ತು ಆರ್ಥಿಕ ನಿರ್ಗತಿಕರಿಗೆ ವರದಾನಗಳಾಗಿವೆ: ಹಿಟ್ಟಿನಮಠ
ಮಹಾಲಿಂಗಪುರ ಜಂಗಮ ಸಮಾಜದಿಂದ ಉಚಿತ ಆರೋಗ್ಯ ಶಿಬಿರ
ಮಹಾಲಿಂಗಪುರ 14: ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಕಡು, ಮಧ್ಯಮ ಮತ್ತು ಆರ್ಥಿಕ ನಿರ್ಗತಿಕರಿಗೆ ವರದಾನಗಳಾಗಿವೆ ಎಂದು ಮಾಜಿ ಜಿಪಂ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಅಭಿಪ್ರಾಯಪಟ್ಟರು.
ಭಾನುವಾರ ಮುಂಜಾನೆ ಆರ್ ಎನ್ ಸಿ ಆಸ್ಪತ್ರೆ ಬಾಗಲಕೋಟ ಮತ್ತು ಸ್ಥಳೀಯ ಜಂಗಮ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನದ ಮುಖ್ಯ ಉದ್ದೇಶ ಇನ್ನೊಬ್ಬರಿಗೆ ಸಹಾಯ ಸಹಕಾರ ನೀಡುವುದೆ ಆಗಿದೆ. ಆದ್ದರಿಂದ ಸಮಾಜ, ಸಂಘ ಸಂಸ್ಥೆಗಳು ಪ್ರತಿಯೊಂದು ಹಳ್ಳಿ ಪಟ್ಟಣಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಅಥವಾ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾಗಿದೆ. ಆ ನಿಟ್ಟಿನಲ್ಲಿ ಮಹಾಲಿಂಗಪುರದ ಜಂಗಮ ಸಮಾಜ ಕಾರ್ಯ ಕೈಗೊಂಡಿರುವುದು ಶ್ಲ್ಯಾಘನೀಯ ಮತ್ತು ಪ್ರತಿ ವರ್ಷವೂ ಇಂತಹ ಪುಣ್ಯ ಕಾರ್ಯಗಳು ಮುಂದುವರಿಯಲಿ ಎಂದರು.
ಪ್ರಗತಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ಮಾನೆ ಮಾತನಾಡಿದರು.ಈ ಆರೋಗ್ಯ ಶಿಬಿರದಲ್ಲಿ ನರರೋಗ ತಜ್ಞ ಡಾ.ರಾಕೇಶ ಎ.ವಿ, ಎಲವು ಕೀಲುಗಳ ತಜ್ಞ ಡಾ.ಸಚಿನ್ ಕಟ್ಟಿ, ಕಿಡ್ನಿ ತಜ್ಞ ಡಾ.ಗಂಗಾಧರ ಚಿರಾಗ ಕಾರ್ಯ ನಿರ್ವಹಿಸಿ, ಬಿಪಿ, ಶುಗರ್, ನರರೋಗ, ಕಿಡ್ನಿ, ಎಲವು-ಕೀಲು ಮತ್ತು ಇನ್ನಿತರ ರೋಗಗಳನ್ನು ತಪಾಸಣೆಗೈದು ಹೆಚ್ಚಿನ ಚಿಕಿತ್ಸೆಗಾಗಿ ಸಿಫಾರಸು ಮಾಡಿದರು. ಈ ಸಮಯದಲ್ಲಿ 200 ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕ್ಕೊಂಡರು. ಅಚ್ಚುಕಟ್ಟಾಗಿ ಕಾರ್ಯ ಮಾಡಿದ ವೈದ್ಯರಿಗೆ ಜಂಗಮ ಸಮಾಜ ಆದಿ ವಚನ ಪಿತಾಮಹ ಗುರು ರೇಣುಕಾಚಾರ್ಯ ಭಾವಚಿತ್ರಗಳನ್ನು ನೀಡಿ ಗೌರವಿಸಿತು.
ಸ್ಥಳೀಯ ಜಂಗಮ ಸಮಾಜ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ, ಡಾ. ಸಿ ಎಂ ವಜ್ಜರ್ಮಟ್ಟಿ, ವಿ ಆಯ್.ಪಂಚಗಟ್ಟಿಮಠ, ಮಹಾಂತೇಶ ಮನ್ನಯ್ಯನವರಮಠ, ಬಸವರಾಜ ಅಯ್ಯನಗೌಡರ, ಮೃತ್ಯುಂಜಯ ಮಠಪತಿ, ಜಗದೀಶ ಮಠಪತಿ, ಈರಣ್ಣ ಚಟ್ಟಿಮಠ, ಸದಾಶಿವ ಹಿರೇಮಠ, ಗುರುಲಿಂಗಯ್ಯ ಮಠಪತಿ ಸ್ವಾಗತಿಸಿ, ಚೆನ್ನಯ್ಯ ಮಸಗುಪ್ಪಿಮಠ ವಂದಿಸಿದರು.ಜಂಗಮ ಯುವ ವೇದಿಕೆ ಅಧ್ಯಕ್ಷ ಸಾಗರ ಮಠದ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಬಿರಾರ್ಥಿಗಳಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಜಂಗಮ ಸಮಾಜದಿಂದ ನೆರವೇರಿತು.