ಸುಮಾರು 63 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ
ಲೋಕದರ್ಶನ ವರದಿ
ಕಂಪ್ಲಿ 01: ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಯೋಜನೆಯಡಿ ಸುಮಾರು 63 ಲಕ್ಷ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಇವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ತಾಲೂಕಿನ ಮೆಟ್ರಿ ಗ್ರಾಪಂಯ ಉಪ್ಪಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 2024-25ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ಅನುದಾನದಲ್ಲಿ ಸುಮಾರು 43 ಲಕ್ಷ ವೆಚ್ಚದಲ್ಲಿ 3 ಕೊಠಡಿ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಲಾಯಿತು.
ನಂತರ ಕೆ.ಶ್ರೀನಿವಾಸರಾವ್ ಮಾತನಾಡಿ, ಮಾನ್ಯ ಶಾಸಕ ಜೆ.ಎನ್.ಗಣೇಶ್ ಅವರು ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿಯೇ ಶಾಸಕ ಗಣೇಶ್ ಅವರು ಸಚಿವರಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ನೆಣಕಿ ಗಿರಿ, ಸಿಆರ್ಪಿಗಳಾದ ಗಂಗಾಧರ, ಪ್ರಭಾಕರ, ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಕನಕಪ್ಪ, ಮುಖ್ಯಗುರು ಸಂಗನಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಹನುಮನಗೌಡ ಸೇರಿದಂತೆ ಸ್ಥಳೀಯ ಮುಖಂಡರು, ಶಿಕ್ಷಕ ವೃಂದವರು ಪಾಲ್ಗೊಂಡಿದ್ದರು.
ಅರಳಿಹಳ್ಳಿ ತಾಂಡ: ಇಲ್ಲಿನ ಸಣಾಪುರ ಗ್ರಾಪಂಯ ಅರಳಿಹಳ್ಳಿ ತಾಂಡದಲ್ಲಿ 2018-20ನೇ ಸಾಲಿನ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಅಂಗನವಾಡಿ-2 ಕೆಂದ್ರದ ಕಟ್ಟಡ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ರಘುನಾಯಕ, ಮುಖಂಡರಾದ ಗವಿಸಿದ್ದಪ್ಪ, ಕರೇಕಲ್ ಮನೋಹರ ಸೇರಿದಂತೆ ಸ್ಥಳೀಯ ಮುಖಂಡರಿದ್ದರು.