ಸಂಸ್ಥಾಪನಾ ದಿನಾಚರಣೆ

ಸಂಸ್ಥಾಪನಾ ದಿನಾಚರಣೆ

ಸಂಸ್ಥಾಪನಾ ದಿನಾಚರಣೆ 

ಹಂಪಿ 08: ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಬೋಧಕರು ಮತ್ತು ಬೋಧಕೇತರರು ತಮ್ಮನ್ನು ತಾವು ಸ್ವಮೌಲ್ಯಮಾಪನ ಮತ್ತು ಸ್ವವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಲಕ್ಷ್ಮಣ್ ತೆಲಗಾವಿ ಅವರು ನುಡಿದರು. 

ಕನ್ನಡ ವಿಶ್ವವಿದ್ಯಾಲಯವು ದಿನಾಂಕ 08.11.2024ರಂದು ಮಂಟಪ ಸಭಾಂಗಣದಲ್ಲಿ ಏರಿ​‍್ಡಸಿದ್ದ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಲಕ್ಷ್ಮಣ್ ತೆಲಗಾವಿ ಅವರು ಮಾತನಾಡಿದರು. 

ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾಗಿದ್ದ ಡಾ.ಚಂದ್ರಶೇಖರ ಕಂಬಾರ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು. ನಂತರ ಬಂದ ಕುಲಪತಿಗಳಿಗೆ ಇಂತಹ ಸವಾಲುಗಳು ಎದುರಾಗಲಿಲ್ಲ. ಆಗ ನಡೆಯುತ್ತಿದ್ದ ಒಡ್ಡೋಲಗ ಸಭೆಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿದ್ಯಾರಣ್ಯ ಅಂದರೆ ವಿದ್ಯೆಯ ಆರಣ್ಯ ಎಂಬರ್ಥದಲ್ಲಿ ಹೆಸರನ್ನು ಸೂಚಿಸಿದ್ದೇ ಕಂಬಾರರು. ವಿಜಯನಗರ ಸಾಮ್ರಾಜ್ಯವನ್ನು ಸದಾ ನೆನಪಿಸುವಂತೆ ಕ್ರಿಯಾಶಕ್ತಿ, ಭುವನವಿಜಯ ಎಂದು ಕಟ್ಟಡಗಳಿಗೆ ಹೆಸರಿಟ್ಟಿದ್ದರು. ನಂತರ ಬಂದ ಕುಲಪತಿಗಳಾದ ಡಾ.ಎಂ.ಎಂ.ಕಲಬುರ್ಗಿ, ಡಾ.ಎಚ್‌.ಜೆ.ಲಕ್ಕಪ್ಪಗೌಡ, ಡಾ.ಬಿ.ಎ. ವಿವೇಕ ರೈ, ಡಾ.ಎ.ಮುರಿಗೆಪ್ಪ, ಡಾ.ಹಿ.ಚಿ.ಬೋರಲಿಂಗಯ್ಯ, ಡಾ.ಮಲ್ಲಿಕಾ ಘಂಟಿ, ಡಾ. ಸ.ಚಿ.ರಮೇಶ ಅವರಿಂದ ಪ್ರಸ್ತುತ ಡಾ.ಡಿ.ವಿ.ಪರಮಶಿವಮೂರ್ತಿ ಅವರವರೆಗೂ ಕನ್ನಡ ವಿಶ್ವವಿದ್ಯಾಲಯವು ವಿವಿಧ ಆಯಾಮಗಳಲ್ಲಿ ಭೌತಿಕ ಮತ್ತು ಬೌದ್ಧಿಕ ಸ್ವರೂಪವನ್ನು ಪಡೆಯಿತು ಎಂದು ತಿಳಿಸಿದರು. 

ವೇದಿಕೆಯಲ್ಲಿ ಉಪಸ್ಥಿತರಿದ್ದ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ವೀರೇಶ ಬಡಿಗೇರ ಅವರು ಸಂಸ್ಥಾಪನಾ ದಿನಾಚರಣೆಯ ಕುರಿತು ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕಚೇರಿಯನ್ನು ಉದ್ಘಾಟನೆ ಮಾಡಿದ ಆಗಿನ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ವೀರ​‍್ಪಮೊಯಿಲಿ ಅವರು ಕನ್ನಡ ಸಾಂಸ್ಕೃತಿಕ ಸಾಮ್ರಾಜ್ಯ ಸ್ಥಾಪನೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಒಂದು ಅಡಿಗಲ್ಲು. ಕನ್ನಡದ ಭವ್ಯ ಪರಂಪರೆಯನ್ನು ವಿಶ್ವಮಟ್ಟಕ್ಕೆ ಒಯ್ಯುವುದು ಇದರ ಗುರಿ. ಉನ್ನತ ಮಟ್ಟದ ಶಿಕ್ಷಣ ಬಹುಜನರ ಪಾಲಿಗೂ ದಕ್ಕಬೇಕು. ಕನ್ನಡ ವಿಶ್ವವಿದ್ಯಾಲಯ ವಿಶ್ವಮಟ್ಟದಲ್ಲಿ ವಿಶ್ವರೂಪ ಹೊಂದಿ ದೀಪಸ್ಥಂಬದ ರೀತಿಯಲ್ಲಿ ಹಂಪಿಯಲ್ಲಿ ಎದ್ದುನಿಂತು ಕನ್ನಡ ಬೆಳಕು ಎಲ್ಲ ಕಡೆ ಚೆಲ್ಲುವಂತಾಗಬೇಕು ಎಂದು ಮಾತನಾಡಿದ್ದನ್ನು ನೆನಪಿಸಿದರು. 

ಕನ್ನಡ ವಿಶ್ವವಿದ್ಯಾಲಯ ಮುಗಿದ ಪುಸ್ತಕವಲ್ಲ, ಕನ್ನಡದ ಸಮಸ್ತ ದೈವ ಬರೆಯಬೇಕಾದ ಪುಸ್ತಕವಿದು ಎಂದು ಡಾ.ಚಂದ್ರಶೇಖರ ಕಂಬಾರ ಅವರು ನುಡಿದಂತೆ ಇದು ಕನ್ನಡಿಗರೆಲ್ಲರ ವಿಶ್ವವಿದ್ಯಾಲಯ. ಕನ್ನಡಿಗರೆಲ್ಲರ ಕನಸು ಮತ್ತು ಜವಾಬ್ದಾರಿಗಳಿಂದ ಬೆಳೆಯಬೇಕಾಗಿದೆ. ಈ ಬೆಳವಣಿಗೆಯಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿರುವ ನಮ್ಮೆಲ್ಲರ ಪಾತ್ರವಿದೆ ಎಂದು ತಿಳಿಸುತ್ತ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯೊಂದಿಗೆ ತಮ್ಮ ಪಾತ್ರವನ್ನು, ನೆನಪುಗಳನ್ನು ಹಂಚಿಕೊಂಡರು. 

ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರ ಅನುಪಸ್ಥಿತಿಯಲ್ಲಿ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾನ್ಯ ಕುಲಸಚಿವರಾದ ಡಾ.ವಿಜಯ್‌ಪೂಣಚ್ಚ ತಂಬಂಡ ಅವರು ಪ್ರೊ.ಲಕ್ಷ್ಮಣ್ ತೆಲಗಾವಿ ಅವರನ್ನು ಗೌರವಿಸಿ, ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯವು ಪವಿತ್ರವಾದ ಸ್ಥಳದಲ್ಲಿ ನೆಲೆಯಾಗಿದ್ದು ನಮಗೆಲ್ಲ ಸ್ಥಾನ, ಮಾನ, ಅನ್ನದ ಜೊತೆಗೆ ಘನತೆಯನ್ನು ಕೊಟ್ಟಿದೆ. ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಕೆಲವು ಪುಟಗಳನ್ನು ಬರೆದರು. ಅವರು ಖಾಲಿ ಬಿಟ್ಟಿದ್ದ ಉಳಿದ ಪುಟಗಳನ್ನು ನಾವೆಲ್ಲರೂ ಸೇರಿ ತುಂಬಬೇಕಾಗಿದೆ. ನಮ್ಮಲ್ಲಿ ಬೌದ್ಧಿಕ ಮತ್ತು ಸೈದ್ಧಾಂತಿಕ ನೆಲೆಗಳಲ್ಲಿ ವ್ಯತ್ಯಾಸಗಳಿವೆ. ಆದರೆ ಕನ್ನಡ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಕಂಟಕ ಬಂದಾಗ ಎಲ್ಲವನ್ನು ಮರೆತು ಒಂದಾಗುತ್ತೇವೆ. ಇದೇ ಕನ್ನಡ ವಿಶ್ವವಿದ್ಯಾಲಯದ ಬೌದ್ಧಿಕ ಪರಂಪರೆ ಎಂದು ನುಡಿಯುತ್ತ, ಭೂಮಿಯ ಪ್ರಶ್ನೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿ, ರಾಜ್ಯದ ಅಧಿಕಾರಸ್ಥರನ್ನು ಗಮನ ಸೆಳೆದ ಕ್ಷಣಗಳನ್ನು ನೆನಪಿಸಿದರು. ಇಲ್ಲಿರುವ ಪ್ರತಿಯೊಬ್ಬ ಅಧ್ಯಾಪಕರಿಗೂ ಕುಲಪತಿಗಳಾಗುವ ಸತ್ವ, ಸಾಮರ್ಥ್ಯ ಇದೆ ಎಂದು ಹೆಮ್ಮೆಯಿಂದ ನುಡಿದರು. 

 ಕಾರ್ಯಕ್ರಮದ ಆರಂಭದಲ್ಲಿ ಡಾ. ಎ. ವೆಂಕಟೇಶ ಉಪಕುಲಸಚಿವರು ಆಡಳಿತ ಇವರು ಎಲ್ಲರನ್ನು ಸ್ವಾಗತಿಸಿ, ಕನ್ನಡ ವಿಶ್ವವಿದ್ಯಾಲಯದ ಭೌತಿಕ ಸ್ವರೂಪದ ವಿವಿಧ ಆಯಾಮಗಳನ್ನು ಪ್ರಾಸ್ತಾವಿಕದಲ್ಲಿ ತಿಳಿಸಿದರು. 

ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತಾತ್ಕಾಲಿಕ ಅಧ್ಯಾಪಕರಾದ ಪದ್ಮಾವತಿ ಕೆ. ನಿರೂಪಿಸಿ, ವಂದಿಸಿದರು. ಬಹಳ ಸಂಭ್ರಮದಿಂದ ಪ್ರಾಧ್ಯಾಪಕರು, ಅಧಿಕಾರಿವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ