ಮಾಜಿ ಶಾಸಕ ರಮೇಶ ಭೂಸನೂರ ಹೇಳಿಕೆ ಸತ್ಯಕ್ಕೆ ದೂರ: ಸುರೇಶ್ ಪೂಜಾರಿ
ಸಿಂದಗಿ 06: ಗಂಗಾ ಕಲ್ಯಾಣ ಯೋಜನೆಯ ಕ್ಷೇತ್ರದ ಅರ್ಹ ಫಲಾನುಭವಿಗಳ ಹೆಸರನ್ನು ಶಾಸಕ ಅಶೋಕ ಮನಗೂಳಿ ರದ್ದುಪಡಿಸಿದ್ದಾರೆ ಎಂಬ ಮಾಜಿ ಶಾಸಕ ರಮೇಶ ಭೂಸನೂರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಈ ಪತ್ರಿಕಾ ಪ್ರಕಟಣೆ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಫಲಾನುಭವಿಗಳ ಹೆಸರನ್ನು ಶಾಸಕರು ರದ್ದು ಮಾಡಿದ್ದಾರೆ ಎಂದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಪ್ರತಿಭಟಿಸುವುದು ಹಕ್ಕು ಪ್ರತಿಭಟಿಸಲಿ, ಆದರೆ, ಪ್ರತಿಭಟನೆ ಮಾಡುವುದಕ್ಕಿಂತ ಮುಂಚೆ ರದ್ದುಪಡಿಸಿದ ಫಲಾನುಭವಿಗಳ ಹೆಸರಿನ ಸರ್ಕಾರದ ಆದೇಶ ಪತ್ರವನ್ನು ನೀಡಬೇಕು. ಅಂದಾಗ ಹೋರಾಟಕ್ಕೆ ಬೆಲೆ ಬರುತ್ತದೆ. ಸುಖಾಸುಮ್ಮನೆ ಶಾಸಕರ ವಿರುದ್ಧ ಪ್ರತಿಭಟಿಸುವುದು, ವಿರುದ್ಧ ಹೇಳಿಕೆ ನೀಡುವುದು. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಶಾಸಕ ಅಶೋಕ ಮನಗೂಳಿ ಕ್ಷೇತ್ರಕ್ಕೆ ರೂ. 125 ಕೋಟಿ ಅನುದಾನ ತಂದಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅದರಂತೆ ಶಾಸಕ ಅಶೋಕ ಮನಗೂಳಿ ತಂದಿರುವ ಸುಮಾರು 200 ಕೋಟಿ ಹೆಚ್ಚು ಅನುದಾನದ ದಾಖಲಾತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. 2021ರ ಸಮಯದಲ್ಲಿ ಸಿಂದಗಿ ಕ್ಷೇತ್ರದ ಶಾಸಕರಾಗಿದ್ದ ರಮೇಶ್ ಭೂಸನೂರ ಸಿಂದಗಿ ಪಟ್ಟಣಕ್ಕೆ 5000 ಮತ್ತು ಆಲಮೇಲ ಪಟ್ಟಣಕ್ಕೆ 2000 ಮನೆಗಳನ್ನು ತಂದಿದ್ದೇನೆ ಎಂದು ತಿಳಿಸಿದ್ದಾರೆ. ಅದರ ಸೂಕ್ತ ದಾಖಲೆಗಳನ್ನು ಕೇಳಿದರೆ ಇಲ್ಲಿಯವರೆಗೂ ಆ ದಾಖಲಾತಿಯ ಯಾವುದೇ ವಿಷಯವನ್ನು ಮಾಜಿ ಶಾಸಕರು ಬಹಿರಂಗಪಡಿಸಿಲ್ಲ. ಹಾಗಾದ್ರೆ ತಾವು ಹೇಳುತ್ತಿರುವುದು ಸುಳ್ಳು ಎಂದು ಸಾರ್ವಜನಿಕರಿಗೆ ಗೊತ್ತಾಗುತ್ತಿದೆ. ಪ್ರತಿಭಟನೆ ನ್ಯಾಯಯುತವಾಗಿರಬೇಕೆ ಹೊರತು ಅದು ಪ್ರಚಾರದ ದಾರಿ ಹಿಡಿಯಬಾರದು. ದಾಖಲಾತಿಯನ್ನು ನೀಡಿದರೆ ಮಾತ್ರ ತಾವು ಮಾಡುತ್ತಿರುವ ಪ್ರತಿಭಟನೆಗೆ ಬೆಲೆ ಸಿಕ್ಕಂತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.