ಗೋಕಾಕ್

ಹಾರೂಗೇರಿ ಪಿಎಸ್‌ಐ ಮಾಳಪ್ಪ ಪೂಜಾರಿ ಮೇಲೆ ಭ್ರಷ್ಟಾಚಾರ ಆರೋಪ

ಹಾರೂಗೇರಿ ಪಿಎಸ್‌ಐ ಮಾಳಪ್ಪ ಪೂಜಾರಿ ಮೇಲೆ ಭ್ರಷ್ಟಾಚಾರ ಆರೋಪ

ನೂರಾರು ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಪಿ.ರಾಜೀವ್ 

ಹಾರೂಗೇರಿ, 23 : ಹಾರೂಗೇರಿ ಪೊಲೀಸ್ ಠಾಣೆ ಪಿಎಸ್‌ಐ ಮಾಳಪ್ಪ ಪೂಜಾರಿ ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ, ಅವರನ್ನು ಹೆದರಿಸಿ, ಹಣದ ಬೇಡಿಕೆಯಿಟ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಕೂಡಲೇ ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಪ್ರತಿಭಟನೆ ನಡೆಸಿದರು. 

ಮಂಗಳವಾರ ಬೆಳಿಗ್ಗೆ ಶ್ರೀ ಚನ್ನವೃಷಭೇಂದ್ರ ಲೀಲಾಮಠದ ಆವರಣದಿಂದ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಪಿ.ರಾಜೀವ್ ಪ್ರತಿಭಟನೆ ಮೆರವಣಿಗೆ ನಡೆಸಿ, ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆತಡೆ ನಡೆಸಿ, ಪಿಎಸ್‌ಐ ಮಾಳಪ್ಪ ಪೂಜಾರಿ ವಿರುದ್ದ ಘೋಷಣೆಗಳನ್ನು ಕೂಗಿದರು. 

ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ ಪಿಎಸ್‌ಐ ಮಾಳಪ್ಪ ಪೂಜಾರಿ ಪೊಲೀಸ್ ಠಾಣೆಯನ್ನು ಹಪ್ತಾ ವಸೂಲಿ ಕೇಂದ್ರ ಮಾಡಿಕೊಂಡಿದ್ದಾನೆ. ನಾನು ಕರೆ ಮಾಡಿ ಹೇಳಿದರೂ ರಾಮಪ್ಪ ಎಂಬುವರಿಂದ 2ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಸಿವಿಲ್ ವಿಷಯದಲ್ಲಿ ಪೊಲೀಸರಿಗೆ ಅಧಿಕಾರವೇ ಇರಲ್ಲ. ಆದಾಗ್ಯೂ ಠಾಣಾಧಿಕಾರಿ ಕಾನೂನು ದುರ್ಬಳಕೆ ಮಾಡಿಕೊಂಡು ಲಂಚಕ್ಕೆ ಬೇಡಿಕೆಯಿಡುತ್ತಿದ್ದಾನೆ. ಮೇಲಾಧಿಕಾರಿಗಳಿಗೆ ಕೆಳಮಟ್ಟದ ಅಧಿಕಾರಿಗಳ ಮೇಲೆ ಹಿಡಿತವಿಲ್ಲದೇ ಭ್ರಷ್ಟಾಚಾರಕ್ಕೆ ಬೆಂಬಲ ಕೊಡುತ್ತಿದ್ದಾರೆಂಬುದು ಸಂಶಯಕ್ಕೆಡೆಮಾಡಿದೆ. ಆ ಕಾರಣದಿಂದ ಅವರು ರಾಜಾರೋಷವಾಗಿ ಲೂಟಿ ಮಾಡುತ್ತಿದ್ದಾರೆ. ಎಸ್‌ಪಿ ಅವರು ವರ್ಷಕ್ಕೊಮ್ಮೆಯೂ ಹಾರೂಗೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸುತ್ತಿಲ್ಲ ಎಂದು ದೂರಿದರು. 

ಕಾಗೆ ಕಥೆ ಹೇಳುವ ಶಾಸಕ : ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಕಾನೂನಿನ ಅರಿವೇ ಇಲ್ಲ. ಭ್ರಷ್ಟಾಚಾರದ ಬಗ್ಗೆ ಕೇಳಿದಾಗ ಹತಾಶರಾಗಿ ಕಾಗೆ ಕಥೆ ಹೇಳುತ್ತಾರೆ. ಹಾರೂಗೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ತಡೆಯಲಾಗುತ್ತಿಲ್ಲವೇಕೆ. ಅವರಿಗೂ ಪಾಲೂ ಹೋಗುತ್ತಿರಬೇಕು ಎಂದರು. 

ಗೋಹತ್ಯೆಗೆ ಸರ್ಕಾರದ ಕುಮ್ಮಕ್ಕು: ಕುಡಚಿ ಮತಕ್ಷೇತ್ರದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ದೇಶ ವಿರೋಧಿ, ಕಾನೂನು ವಿರೋಧಿ ಚಟುವಟಿಕೆಗೆ ಕರ್ನಾಟಕದಲ್ಲಿ ರಕ್ಷಣೆಯಿದೆ. ಸರ್ಕಾರ ಅಂತವರಿಗೆ ರಾಜಾರೋಷವಾಗಿ ಕುಮ್ಮಕ್ಕು ಕೊಡುತ್ತಿದೆ ಎಂದು ಮಾಜಿ ಶಾಸಕ ಪಿ.ರಾಜೀವ್ ಹೇಳಿದರು. 

ಅಥಣಿ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡುತ್ತ ಮನವಿಯಲ್ಲಿರುವ ಅರ್ಜಿದಾರರಿಂದ ಸಾಕ್ಷಿಗಳನ್ನು ಕಲೆಹಾಕಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಅಧಿಕಾರಿಯ ಮೇಲೆ ಆರೋಪ ಸಾಬೀತಾದರೆ ಮೇಲ್ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು ಎಂದ ಅವರು ಪೊಲೀಸ್ ಅಧಿಕಾರಿಗಳು ದುರುದ್ದೇಶದಿಂದ ಯಾರ ಮೇಲೂ ಕ್ರಮಕೈಗೊಳ್ಳುವುದಿಲ್ಲ. ದೂರಿನಲ್ಲಿ ಫಿರ್ಯಾದಿ ನೀಡಿದ ದೂರಿನ ಮೇಲೆ ತನಿಖೆ ನಡೆಸುತ್ತಾರೆ. ತಪ್ಪಿಲ್ಲದಿದ್ದರೆ ತನಿಖೆಗೆ ಸಹಕರಿಸುವುದರಲ್ಲಿ ತಪ್ಪೇನಿದೆ. 

ಸಿವಿಲ್ ವ್ಯಾಜ್ಯದಲ್ಲಿ 107ಕೇಸ್ ದಾಖಲಿಸುವ ನಿರ್ದೇಶನವಿದೆ. ಸಿವಿಲ್ ವ್ಯಾಜ್ಯದಲ್ಲಿ ಮುಂದೆ ಜಗಳವಾಡಬಾರದೆಂದು ತಹಸೀಲ್ದಾರರ ಸಮ್ಮುಖದಲ್ಲಿ ಅವರು ನಿಗದಿ ಪಡಿಸಿದ ಮೊತ್ತದ ಬಾಂಡ್ ಮಾಡಲಾಗುತ್ತದೆ. ಉಲ್ಲಂಘಿಸಿದಲ್ಲಿ ಆ ಬಾಂಡ್ ಹಣವನ್ನು ಮುಟ್ಟುಗೋಲು ಹಾಕಲಾಗುತ್ತದೆ. ಇನ್ನು ಸಿಬ್ಬಂದಿ ಬಂದೋಬಸ್ತ್‌, ಕೆಲವು ಪರವಾಣಿಗೆ ಪಡೆಯಲು ಕಾನೂನು ಚೌಕಟ್ಟಿನಲ್ಲಿ ಹಣ ತುಂಬಬೇಕಾಗುತ್ತದೆ. ಎಲ್ಲ ಠಾಣೆಗಳಲ್ಲೂ ಎಲ್ಲ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಲಗತ್ತಿಸಲಾಗಿರುತ್ತದೆ ಸಂಪರ್ಕಿಸಿ, ದೂರು, ಸಮಸ್ಯೆ ಹೇಳಿಕೊಳ್ಳಬಹುದೆಂದು ಪ್ರತಿಭಟನಾಕಾರರಿಗೆ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ ಮಾಹಿತಿ ನೀಡಿದರು. 

ರಾಯಬಾಗ ಸಿಪಿಐ ಬಿ.ಎಸ್‌.ಮಂಟೂರ, ಕುಡಚಿ ಪಿಎಸ್‌ಐ ಪ್ರೀತಮ್ ನಾಯಿಕ, ಶಿವರಾಜ ಧರಿಗೋಣ, ಐಗಳಿ ಪಿಎಸ್‌ಐ ಕುಮಾರ ಹಾಡಕಾರ ಹಾಗೂ 2 ಕೆಎಸ್‌ಆರ್‌ಪಿ ತುಕಡಿ ಮತ್ತು 30ಜನ ಪೊಲೀಸ್ ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್‌ ಮಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡರು. 


ಸುದ್ದಿ ಓದಿ