ಕಾಗವಾಡ

ಹಬ್ಬದ ಸಮಯದಲ್ಲಿ ಸರ್ಕಾರದ ನಿಯಮ ಪಾಲಿಸಿ; ಶಾಂತಿ ಕಾಪಾಡಿ: ಸಿಪಿಐ ಸಂತೋಷ ಹಳ್ಳೂರ..!

ಹಬ್ಬದ ಸಮಯದಲ್ಲಿ ಸರ್ಕಾರದ ನಿಯಮ ಪಾಲಿಸಿ; ಶಾಂತಿ ಕಾಪಾಡಿ: ಸಿಪಿಐ ಸಂತೋಷ ಹಳ್ಳೂರ..!

ಕಾಗವಾಡ 14: ತಾಲೂಕಿನ ಐನಾಪೂರ ಪಟ್ಟಣದಲ್ಲಿ ಅಥಣಿ ಸಿಪಿಐ ಸಂತೋಷ ಹಳ್ಳೂರ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ ನೇತೃತ್ವದಲ್ಲಿ ಪಟ್ಟಣದ ವ್ಯಾಪ್ತಿಯ ಸಾರ್ವಜನಿಕ ಗಣೇಶ ಮಂಡಳಗಳು ಹಾಗೂ ಹಿಂದೂ-ಮುಸ್ಲಿಂ ಮುಖಂಡರು, ಗ್ರಾಮಸ್ಥರ ಜೊತೆಗೆ ಗಣೇಶ ಚತುರ್ಥಿ, ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಪಾಲನಾ ಸಭೆಯು ಬುಧವಾರ ದಿ. 13 ರಂದು ಸಂಜೆ ಜರುಗಿತು. 

ಪಟ್ಟಣ ಪಂಚಾಯತ ಆವರಣದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಸಿಪಿಐ ಸಂತೋಷ ಹಳ್ಳೂರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕಾನೂನು ನಿಯಮ ಪಾಲನೆ ಮಾಡುವ ಮೂಲಕ ಹಬ್ಬಗಳನ್ನು ಆಚರಣೆ ಮಾಡಬೇಕು. ಪ್ರತಿ ಮಂಡಳಿಯ ವಾಟ್ಸಪ್ ಗುಂಪು ಮಾಡಿ, ಪೋಲಿಸ್ ಇಲಾಖೆಯಿಂದ ಬರುವ ಸುತ್ತೋಲೆ ಪಾಲನೆ ಮಾಡುತ್ತ ಒಟ್ಟಾಗಿ ಸಹಕಾರದಿಂದ ಶಾಂತಿ ಸುವ್ಯವಸ್ಥೆ ರೀತಿಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಲು ಸಹಕರಿಸಬೇಕು ಎಂದು ಸೂಚಿಸಿದರು. 

ಪಿಎಸ್‌ಐ ರಾಘವೇಂದ್ರ ಖೋತ ಮಾತನಾಡಿ, ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸುರಕ್ಷಿತ ಸ್ಥಳ ಆಯ್ಕೆಮಾಡಿಕೊಂಡು, ಕಡ್ಡಾಯವಾಗಿ ಮೊದಲು ಗ್ರಾಮ ಅಥವಾ ಪಟ್ಟಣ ಪಂಚಾಯತ ಪರವಾನಗಿ ಪಡೆಯಬೇಕು. ನಂತರ ಹೆಸ್ಕಾಂ ಹಾಗೂ ಪೋಲಿಸ್ ಇಲಾಖೆಯ ಅನುಮತಿ ಪಡೆಯಬೇಕು. ದಿ.20 ರಿಂದ ಪರವಾನಿಗೆ ನೀಡಲು ಚಾಲನೆ ನೀಡಲಾಗುವುದು. ಗಣೇಶನ ವಿಸರ್ಜನೆ ಸಮಯದಲ್ಲಿ ಕರ್ಕಷ ಶಬ್ದ ಮಾಡುವ ಡಿಜೆ, ಡಾಲ್ಬಿಗಳನ್ನು ಹಚ್ಚುವುದನ್ನು ಸರ್ಕಾರ ಸಂಪೂರ್ಣ ನಿಷೇದಿಸಿದೆ. ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿಕೊಳ್ಳಬಹುದು. ಮದ್ಯ ಸೇವನೆ ಮಾಡಿ, ಗಲಭೆಗೆ ಅವಕಾಶ ಮಾಡುವಂತವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಪ್ರಮುಖರು, ಸಾರ್ವಜನಿಕರು ಪ್ರತಿ ವರ್ಷದಂತೆ ಭಾವೈಕ್ಯತೆಯಿಂದ ಎರಡೂ ಹಬ್ಬಗಳನ್ನು ಆಚರಿಸಲು ಇಲಾಖೆ ಜೊತೆಗೆ ಸಹಕರಿಸಬೇಕೆಂದರು.  

ಈ ವೇಳೆ ಅಪರಾಧ ವಿಭಾಗದ ಪಿಎಸ್‌ಊ ಆಳಂದ, ಪ.ಪಂ. ಸದಸ್ಯ ಸಂಜಯ ಭಿರಡಿ, ದಾದಾ ಜಂತಣ್ಣವರ, ಪ್ರಕಾಶ ಚಿನಗಿ, ಪೋಲಿಸ್ ಸಿಬ್ಬಂದಿಗಳಾದ ವಿಜಯ ನರಗಟ್ಟಿ, ಸುರೇಶ ನಂದಿವಾಲೆ ಸೇರಿದಂತೆ ಗಣೇಶ ಮಂಡಳದ ಸದಸ್ಯರು, ಐನಾಪೂರ ಪಟ್ಟಣದ ಮುಖಂಡರು, ನಿವಾಸಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ