ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ಐದು ಲಘು ಭೂಕಂಪನ
ಕೊಲ್ಹಾಪುರ/ಸತಾರಾ, ಸೆ. 23 : ಸತಾರಾ ಜಿಲ್ಲೆಯ ಕರಾಡ್ ತಾಲೂಕಿನ ಕೊಯ್ನಾನಗರದಲ್ಲಿರುವ ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ಬಳಿಕ ಬೆಳಗಿನ 4 ಗಂಟೆಯೊಳಗೆ ಐದು ಲಘು ಭೂಕಂಪನಗಳು ದಾಖಲಾಗಿವೆ.
ಅಧಿಕಾರಿಗಳ ಪ್ರಕಾರ, ಈ ಭೂಕಂಪನಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.1ರಿಂದ 2.5ರಷ್ಟಿತ್ತು. ತೀವ್ರತೆ ಕಡಿಮೆಯಾಗಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ಕಂಪನದ ಅನುಭವವಾಗಿಲ್ಲ.
ಮೊದಲ ಕಂಪನವು ರಾತ್ರಿ ಸುಮಾರು 12.30ಕ್ಕೆ ದಾಖಲಾಗಿದ್ದು, ಅದರ ತೀವ್ರತೆ 2.1 ಆಗಿತ್ತು. ಬಳಿಕ ರಾತ್ರಿ 1.30ಕ್ಕೆ 2.3 ತೀವ್ರತೆಯ ಎರಡನೇ ಕಂಪನ ಸಂಭವಿಸಿದೆ. ಬೆಳಗಿನ 3.15ಕ್ಕೆ 2.2 ತೀವ್ರತೆಯ ಮೂರನೇ ಕಂಪನ ದಾಖಲಾಗಿದೆ.
ಇದಾದ ಸುಮಾರು 15 ನಿಮಿಷಗಳ ಬಳಿಕ 2.5 ತೀವ್ರತೆಯ ಮತ್ತೊಂದು ಕಂಪನ ದಾಖಲಾಗಿದ್ದು, ಬೆಳಗಿನ 4 ಗಂಟೆಗೆ 2.1 ತೀವ್ರತೆಯ ಐದನೇ ಕಂಪನ ಸಂಭವಿಸಿದೆ.
ಈ ಘಟನೆಗಳಿಂದ ಯಾವುದೇ ಸಾವು-ನೋವು ಅಥವಾ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.