ಕಾರವಾರ

ಸ್ತ್ರೀಶಕ್ತಿ ಕುಟುಂಬದ ಬೆನ್ನೆಲುಬು: ಡಾ. ಗಿರಿಧರ್ ಕಜೆ

ಸ್ತ್ರೀಶಕ್ತಿ ಕುಟುಂಬದ ಬೆನ್ನೆಲುಬು: ಡಾ. ಗಿರಿಧರ್ ಕಜೆ

ಮಡಗಾಂವ್, ಆ.10: ಮಹಿಳೆಯರು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಸುಸಂಸ್ಕೃತ ಕುಟುಂಬ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ತ್ರೀಶಕ್ತಿ ಕುಟುಂಬದ ಬೆನ್ನೆಲುಬಾಗಿದೆ ಎಂದು ಬೆಂಗಳೂರಿನ ಶ್ರೀ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ್ ಕಜೆ ಹೇಳಿದರು.  

ಗೋವಾದ ಮಡಗಾಂವ್ನಲ್ಲಿ ಶ್ರೀ ಹವ್ಯಕ ಮಹಾಸಭೆಯ ಗೋವಾ ಪ್ರಾಂತ್ಯ ಮಹಿಳಾ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಹವ್ಯಕ ಮಹಿಳೆಯರನ್ನು ಸಂಘಟಿಸುವ ಉದ್ದೇಶದಿಂದ ಶ್ರೀ ಹವ್ಯಕ ಮಹಾಸಭೆಯ ವತಿಯಿಂದ ದೇಶ-ವಿದೇಶಗಳಲ್ಲಿ ಒಟ್ಟು 83 ಮಹಿಳಾ ವೇದಿಕೆಗಳನ್ನು ರಚಿಸಲಾಗುತ್ತಿದೆ. ವಿದೇಶದಲ್ಲಿ ಎಂಟು, ಹೊರನಾಡಿನಲ್ಲಿ ಎಂಟು ಹಾಗೂ ಉಳಿದ ವೇದಿಕೆಗಳನ್ನು ಕರ್ನಾಟಕದಲ್ಲಿ ರಚಿಸಲಾಗುವುದು ಎಂದು ಡಾ. ಕಜೆ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಸುಲೋಚನಾ ಹೆಗಡೆ ಆಗಮಿಸಿದ್ದರು. ಶ್ರೀಮತಿ ವಿಜಯ ಹೆಗಡೆ ಅವರು ಸ್ವಾಗತಿಸಿದರು. ಗೋವಾ ಪ್ರಾಂತ್ಯ ಮಹಿಳಾ ವೇದಿಕೆಯ ನಿಯೋಜಿತ ಸಂಚಾಲಕಿ ಶ್ರೀಮತಿ ರೇಖಾ ಹೆಗಡೆ, ಮುಂಬೈ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಾಂತಾ ಭಟ್ ಹಾಗೂ ಶ್ರೀಮತಿ ಅನುರಾಧಾ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೀಮತಿ ರೇಖಾ ಹೆಗಡೆ ಅವರ ಸಂಚಾಲಕತ್ವದಲ್ಲಿ 18 ಮಹಿಳೆಯರನ್ನು ಒಳಗೊಂಡ ಗೋವಾ ಪ್ರಾಂತ್ಯ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. 


ಸುದ್ದಿ ಓದಿ