ಬಳ್ಳಾರಿ

ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಜೆಡಿಎಸ್ ಸಂಘಟನೆ: ತಾಯಣ್ಣ

ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಜೆಡಿಎಸ್ ಸಂಘಟನೆ: ತಾಯಣ್ಣ

ಬಳ್ಳಾರಿ 17: ಸಿರುಗುಪ್ಪ ತಾಲೂಕಿನ ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಪಕ್ಷದ ನೂತನ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ ಹೇಳಿದರು.  

ಜಿಲ್ಲೆಯ ಸಿರುಗುಪ್ಪ ಪಟ್ಟಣದ ಅಭಯ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಸಿರುಗುಪ್ಪದಲ್ಲಿ ಜೆಡಿಎಸ್ ಪ್ರಬಲವಾಗಿತ್ತು. ಸಿರಿಗೇರಿ ರೇವಣಸಿದ್ದಯ್ಯ ಸ್ವಾಮಿ, ಚಂದ್ರಶೇಖರಯ್ಯ ಸ್ವಾಮಿ ಅವರು ಈ ಭಾಗದಲ್ಲಿ ಎಂಎಲ್‌ಎ ಆಗಿದ್ದರು. ಅಲ್ಲದೆ, ಸಿರುಗುಪ್ಪ ತಾಲೂಕಿನಲ್ಲಿ ಪ್ರತಿ ಹೋಬಳಿ, ಹಳ್ಳಿ ಹಳ್ಳಿಗಳಲ್ಲಿಯೂ ಜೆಡಿಎಸ್ ಪ್ರಬಲವಾಗಿತ್ರು. ಈಗ ಮತ್ತೆ ತಾಲೂಕಿನ ಪ್ರತಿ ಹಳ್ಳಿಗಳಿಗೆ ಪಾದಯಾತ್ರೆ ನಡೆಸಿ ಪಕ್ಷ ಸಂಘಟಿಸಲಾಗುವುದು. ಈ ಕ್ಷೇತ್ರದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ಸಾಧಿಸಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದರು.  

ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಹಾಕಿಕೊಂಡಂತ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ, ರೈತರ ಸಾಲ ಮನ್ನಾ, ಬೀದಿ ಬದಿ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ ಮಂಜೂರು ಸೇರಿದಂತೆ ಇನ್ನು ಅನೇಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗುವುದಾಗಿ ತಿಳಿಸಿದರು.  

ಅಲ್ಲದೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಎಲ್ಲಾ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರ ಗೆಲುವಿಗೆ ಪೂರಕವಾಗುವಂತೆ ಈಗಿನಿಂದ ತಾಲೂಕಿನಲ್ಲಿ ಪಕ್ಷ ಸಂಘಟಿಸಲು ತಾಲೂಕು ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಮುಂದಾಗಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮುನ್ನಾಬಾಯಿ, ಮುಖಂಡರಾದ ಲಕ್ಷ್ಮೀಕಾಂತ ರೆಡ್ಡಿ, ಯುವ ಜನತಾದಳ ಜಿಲ್ಲಾಧ್ಯಕ್ಷ ಡಿ. ವಿಜಯಕುಮಾರ, ಶಿವಯ್ಯ, ಪರಮೇಶ್ವರ ನಾಯಕ, ಯಲ್ಲನಗೌಡ, ತಾಳೂರು ಪುರುಷೋತ್ತಮಗೌಡ, ರಾಘವರೆಡ್ಡಿ, ಎಪಿಎಂಸಿ ಸದಸ್ಯ ನಾಗಪ್ಪ, ಮೀನಹಳ್ಳಿ ಬಸಪ್ಪ, ಚಾಗನೂರು ನಾಗರಾಜ, ರಾಮೇಶ್ವರಿ, ಜಯಲಕ್ಷ್ಮಿ, ಭವಾನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ