ಮಹಲಿಂಗಪುರ

ಕಠಿಣ ಪರಿಶ್ರಮದಿಂದ ಸಮಾಜದವರು ಮುಂಚೂಣಿಗೆ ಬರಲಿ

ಕಠಿಣ ಪರಿಶ್ರಮದಿಂದ ಸಮಾಜದವರು ಮುಂಚೂಣಿಗೆ ಬರಲಿ

ಪುರುಷೋತ್ತಮಾನಂದಪುರಿ ಸ್ವಾಮಿಜಿ ಕರೆ: ಉಪ್ಪಾರ ಸಮುದಾಯದ ಜನಪ್ರತಿನಿಧಿಗಳಿಗೆ, ಸಾಧಕರಿಗೆ ಸನ್ಮಾನ

ಮಹಾಲಿಂಗಪುರ ೦೫: ಸಮಾಜದ ಕುಲಬಾಂಧವರು, ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಗೆ ಬರಬೇಕೆಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಪೀಠದ ಪೀಠಾಧಿಪತಿ ಪುರುಷೋತ್ತಮಾನಂದಪುರಿ ಜಗದ್ಗುರುಗಳು ಕರೆ ನೀಡಿದರು.

ಸಮೀಪದ ಕೆಸರಗೊಪ್ಪ ಗ್ರಾಮದ ಭಗೀರಥ ದೇವಸ್ಥಾನದ ಅನುಭವ ಮಂಟಪದಲ್ಲಿ ಸಮಾಜದ ಜಿಲ್ಲಾ ಮತ್ತು ತಾಲೂಕು ಘಟಕಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಮಾಜದ ಸಾಧಕರಿಗೂ ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

 ಕರ್ನಾಟಕ ಸರ್ಕಾರ ಉಪ್ಪಾರ ಸಮಾಜವನ್ನು ಮೀಸಲಾತಿ ಅಡಿಯಲ್ಲಿ  ಪರಿಶಿಷ್ಟ ಪಂಗಡಕ್ಕೆ  ಸೇರಿಸಬೇಕು. ಈ ಹಿಂದೆ ನೇಮಕ ಮಾಡಿದ 03 ವರದಿಗಳಲ್ಲಿ ನಮ್ಮ ಜನಾಂಗಕ್ಕೆ ನೀಡಬೇಕಾದ ಸೌಲಭ್ಯಗಳ ಕುರಿತು ಹಾಗೂ ಹಿಂದುಳಿದ ಭಗೀರಥ ಉಪ್ಪಾರ ಸಮಾಜವನ್ನು ರಾಜಕೀಯವಾಗಿ ಮೀಸಲಾತಿ ಕಲ್ಪಿಸಲು ಸರ್ಕಾರಗಳಿಗೆ ಒತ್ತಾಯಿಸಿದರು.

ದೇಶಕ್ಕಾಗಿ ನಮ್ಮ ಜನಾಂಗದ ಅನೇಕರು ಸ್ವಾತಂತ್ರ್ಯಕ್ಕಾಗಿ ಹಾಗೂ ಗಾಂಧೀಜಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿ ಹುತಾತ್ಮರಾಗಿದ್ದಾರೆ ಎಂದರಲ್ಲದೆ ನಮ್ಮ ಗುರುಗಳಾದ ಲೇಪಾಕ್ಷಿ ಮಹಾಸ್ವಾಮಿಗಳು 70 ವರ್ಷಗಳ ಹಿಂದೆ  ಸಮಾಜದ ಸ್ಥಾನಮಾನಕ್ಕಾಗಿ ಹೋರಾಡಿದ್ದನ್ನು  ಈ ಸಂದರ್ಭದಲ್ಲಿ  ಸ್ಮರಿಸಿಕೊಂಡರು. 

ನಮ್ಮ ಸಮಾಜದ ವತಿಯಿಂದ ಹಕ್ಕೊತ್ತಾಯಕ್ಕಾಗಿ ಜಿಲ್ಲೆ ಜಿಲ್ಲೆಗಳಿಂದ ಸಮಾವೇಶಗಳ ಮುಖಾಂತರ ಭಗೀರಥ ಪೀಠಕ್ಕೆ ಆಗಮಿಸಿ ಅಲ್ಲಿಂದ ಬೆಂಗಳೂರು ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಉಪ್ಪಾರ ಸಮಾಜಕ್ಕೆ ಉಪ್ಪಿನ ಸ್ವಭಾವ ಇರುವುದರಿಂದ ಎಲ್ಲ ಸಮಾಜಗಳೊಂದಿಗೆ ಬೆರೆತು ಕಾರ್ಯ ನಿರ್ವಹಿಸಲು ಸಾಧಕರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿದರು.

ಸಭೆಯನ್ನುದ್ದೇಶಿಸಿ ಜಿಲ್ಲಾ ಅಧ್ಯಕ್ಷ ಭೀಮಶಿ ಪಾಟೀಲ್, ಮಹಾಲಿಂಗಪ್ಪ ಲಾತೂರ್, ವರದಿಗಾರರಾದ ಜಯರಾಮಶೆಟ್ಟಿ,ಡಾ. ಎಚ್ ಕೆ ಜಗದಾಳ, ಸಂಗಪ್ಪ ಹಲ್ಲಿ, ಸಂಘಟನೆಯ ಕುರಿತು ಮಾತನಾಡಿದರು.

ತಾಲೂಕ ಉಪ್ಪಾರ ಸಮಾಜದ ಅಧ್ಯಕ್ಷ ಭೀಮಶಿ ಸಸಾಲಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧಕರ, ಜನಪ್ರತಿನಿಧಿಗಳ ಭವಿಷ್ಯದ ಜವಾಬ್ದಾರಿಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಸಿಪಿಐ ಶ್ರೀಶೈಲ್ ಬ್ಯಾಕೋಡ,ಧರೆಪ್ಪ ಬ್ಯಾಕೋಡ, ಆನಂದ್ ಢವಳೇಶ್ವರ, ಪರಪ್ಪ ಬ್ಯಾಕೋಡ, ಮಾರುತಿ ತೇಜಪ್ಪಗೋಳ, ಬಸಪ್ಪ ಗೋಪಾಳಿ, ಚನ್ನು ದೇಸಾಯಿ, ದುಂಡಪ್ಪ ಜಾಧವ್,  ವಿಠ್ಠಲ್ ಬನಾಜ್, ಕಲ್ಲಪ್ಪ ದಡ್ಡಿಮನಿ, ಶ್ರೀಶೈಲ ಸತ್ತಿಗೇರಿ, ವಿಠ್ಠಲ ಢವಳೇಶ್ವರ, ಡಾ.ಎಂ.ಬಿ ಪೂಜೇರಿ, ಶಿವರಾಯಪ್ಪ ಮೋಪಗಾರ, ಬಸಪ್ಪ ಬ್ಯಾಕೋಡ ಇನ್ನೂ ಇತರರಿದ್ದರು. 

ಜಿಲ್ಲೆಯ ಸಮಾಜದ ನೂರಾರು ಸಾಧಕರು ಹಾಗೂ ಜನಪ್ರತಿನಿಧಿಗಳು, ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುರೇಶ್ ಪಾಟೀಲ್ ನಿರೂಪಿಸಿ, ನಾಗರಾಜ್ ಕಾಡಾಪುರ ಸ್ವಾಗತಿಸಿ, ಮಾರುತಿ ಕರೋಶಿ ವಂದಿಸಿದರು.

ಸುದ್ದಿ ಓದಿ