ಬಸವ ಜಯಂತಿ ಉತ್ಸವ ಸಮಿತಿಯಿಂದ ಸೆ.27ರಂದು ಸತ್ಕಾರ ಸಮಾರಂಭ
ಬೆಳಗಾವಿ 25: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಮಹೋತ್ಸವವನ್ನು ಬೆಳಗಾವಿಯ ವಿವಿಧ ಬಸವಪರ ಸಂಘಟನೆಗಳ ವತಿಯಿಂದ ಏಪ್ರಿಲ್ 2026ರಲ್ಲಿ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಜಿಲ್ಲೆಯಾದ್ಯಂತ ಸಾವಿರಾರು ಬಸವಾಭಿಮಾನಿಗಳು ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.ಬಸವ ಜಯಂತಿ ಮಹೋತ್ಸವದ ಯಶಸ್ಸಿಗೆ ಜಿಲ್ಲೆಯ ವಿವಿಧ ಲಿಂಗಾಯತ ಗಣ್ಯರು, ಪಕ್ಷಾತೀತ ರಾಜಕೀಯ ಮುಖಂಡರು ಹಾಗೂ ಮಠಾಧೀಶರು ಸಹಕಾರ ಮತ್ತು ಮಾರ್ಗದರ್ಶನ ನೀಡಿದ್ದರು. ಇವರ ಸಹಕಾರವನ್ನು ಸ್ಮರಿಸುವ ಉದ್ದೇಶದಿಂದ ಬಸವ ಜಯಂತಿ ಉತ್ಸವ ಸಮಿತಿಯ ವತಿಯಿಂದ ಸತ್ಕಾರ ಸಮಾರಂಭ ಆಯೋಜಿಸಲಾಗಿದೆ.
ಸಮಾರಂಭವು ಸೆ.27ರಂದು ಭಾನುವಾರ ಸಂಜೆ 4 ಗಂಟೆಗೆ ಬೆಳಗಾವಿಯ ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿದೆ. ಬಸವ ಜಯಂತಿ ಮಹೋತ್ಸವದ ಯಶಸ್ಸಿಗೆ ಪ್ರಮುಖವಾಗಿ ಕಾರಣರಾದ ಸಹಕಾರ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಪಕ್ಷಾತೀತ ರಾಜಕೀಯ ಮುಖಂಡರು, ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಗುವುದು ಎಂದು ಸಮಿತಿ ತಿಳಿಸಿದೆ.ಜಿಲ್ಲೆಯ ಎಲ್ಲ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸತ್ಕಾರ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಬಸವ ಜಯಂತಿ ಉತ್ಸವ ಸಮಿತಿಯ ಸಂಚಾಲಕ ಹಾಗೂ ನ್ಯಾಯವಾದಿ ಬಸವರಾಜ ರೊಟ್ಟಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.