ಪೈಪ್ ಲೈನ್ ಒಡೆದು ರಸ್ತೆ ತುಂಬೆಲ್ಲ ನೀರು. ಡೆಂಗ್ಯೂ, ಕಾಲರಾ ಸಾಂಕ್ರಾಮಿಕ ರೋಗಗಳ ಭೀತಿ
ಮಹಾಲಿಂಗಪುರ 19: ಪಟ್ಟಣದ ಬಸ್ ನಿಲ್ದಾಣ ಕಡೆಗೆ ಸಾಗುವ ಅಷ್ಟಗಿ ಟಾಕೀಸ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಸರಿ ಸುಮಾರು ವರ್ಷದಿಂದ ಪುರಸಭೆ ಪೈಪ್ ಲೈನ್ ಒಡೆದು ರಸ್ತೆ ತುಂಬೆಲ್ಲ ಪ್ರತಿ ದಿವಸ ಸಾವಿರಾರು ಲೀಟರ್ ಗಳಷ್ಟು ಕುಡಿಯುವ ನೀರು ಪೋಲಾಗಿ ಹೋಗುತ್ತಿದ್ದು ಮತ್ತು ಮರಳಿ ಕಲುಷಿತ ನೀರು ಸೇರಿ ಡೆಂಗ್ಯೂ, ಕಾಲರಾ ಮತ್ತು ಇತರೆ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿಯೂ ಜನತೆಯಲ್ಲಿ ಮೂಡಿದೆ.
ಕಳೆದ ವರ್ಷ ರಾಜ್ಯದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಆವರಿಸಿ, ಅಂತರ್ಜಲಮಟ್ಟ ಪಾತಾಳ ಕಂಡು ,ಬೋರವೆಲ್ ಸಹ ನೀರು ಒದಗಿಸುವುದನ್ನು ಸ್ತಗಿತಗೊಳಿಸಿದವು.ಕೆಲವು ಊರುಗಳಲ್ಲಿಯಂತೂ ಹಲವಾರು ಕಿಮೀ ಗಳ ವರೆಗೆ ನಡೆದುಕ್ಕೊಂಡೇ ನೀರು ತರುವಂತಹ ಅನಿವಾರ್ಯತೆ ತಲೆದೋರಿತು. ಬೆಂಗಳೂರಂತಹ ಮಹಾ ನಗರಗಳಲ್ಲಿ ಶುಧ್ಧ ನೀರಿನ ಕೊರತೆಯಿಂದ ರೇಷನ್ ಕಾರ್ಡ್ ಮೂಲಕ ನೀರು ವಿತರಣೆ ನಡೆಯಿತು.
ಅಂತಹ ಸಮಯದಲ್ಲಿ ಪಟ್ಟಣದ ಶುಧ್ಧ ನೀರಿನ ಮೂಲ ಕಾಪಾಡಲು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅವರು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದು ಅನುಮತಿ ಪಡೆಯಬೇಕೆಂದು ಹೇಳುತ್ತ ಹೇಳುತ್ತ ಕಾಲಹರಣ ಮಾಡಿದರೆ ವಿನಃ ಕಾರ್ಯ ಪ್ರವರ್ತರಾಗಲಿಲ್ಲ. ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಕಾಳಜಿ ಮತ್ತು ಜೀವ ಜಲ ಸಂರಕ್ಷಣೆ ಮಾಡುವುದನ್ನು ಮರೆತಿರುವುದು ವಿಪರ್ಯಾಸ ಸಂಗತಿ.
ಸಾರ್ವಜನಿಕರು ಕಲುಷಿತ ನೀರು ಕುಡಿದು ಕಾಯಿಲೆಗೆ ಒಳಗಾಗುವುದನ್ನು ತಪ್ಪಿಸಲು ತಕ್ಷಣ ಪುರಸಭೆ ದುರುಸ್ಥಿ ಕಾರ್ಯ ಕೈಗೊಳ್ಳಬೇಕು ಇಲ್ಲವಾದಲ್ಲಿ ಜನ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುವ ಕಾಲ ದೂರವಿಲ್ಲ.
ಸ್ಥಳೀಯ ಪುರಸಭೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಇಲ್ಲಿಯವರೆಗೆ ಎಷ್ಟು ಗ್ಯಾಲನ್ ನೀರು ಪೋಲಾಗಿರಬಹುದು. ನೀವೆ ಊಹಿಸಿಕೊಳ್ಳಿ.ಈಗ ರಾಜ್ಯದೆಲ್ಲೆಡೆ ಡೆಂಗ್ಯೂ, ಕಾಲರಾ, ಸಾಂಕ್ರಾಮಿಕ ರೋಗಗಳ ಹಾವಳಿಯೂ ಕೂಡ ಸದ್ದು ಮಾಡುತ್ತಿವೆ. ನೀರು ಸರಬರಾಜು ಸ್ತಗಿತಗೊಂಡಾಗ ಒಡೆದ ಪೈಪ ಲೈನ್ ನಲ್ಲಿ ನಿಂತ ಕಲುಷಿತ ನೀರು ಪುನಃ ಸೇರಿಕ್ಕೊಳ್ಳುತ್ತದೆ. ಮತ್ತೆ ಆರಂಭಗೊಂಡಾಗ ಶುಧ್ಧ ಮತ್ತು ಕಲುಷಿತ ಎರಡು ಸೇರಿ ನಲ್ಲಿಗಳಿಗೆ ಸಾಗುತ್ತದೆ.ಇದನ್ನು ಕುಡಿದ ಜನರ ಆರೋಗ್ಯದ ಪಾಡು ನೀವೆ ಹೇಳಿ.ಇಲ್ಲಿಯವರೆಗೆ ಮಹಾಲಿಂಗಪುರ ಪುರಸಭೆ ಅಧಿಕಾರಿಗಳು ಜನರಿಗೆ ಬಳುವಳಿಯಾಗಿ ಕಲುಷಿತ ನೀರನ್ನು ಒದಗಿಸುತ್ತಿದೆ ಎಂದರೆ ತಪ್ಪಾಗಲಾರದು.
ಇದರಿಂದ ಸುಲಭವಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ. ರಾಜ್ಯ ಸರ್ಕಾರವೇ ಡೆಂಗ್ಯೂ, ಕಾಲರಾ ವಿರುದ್ಧ ಸಮರ ಸಾರಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದು, ಪುರಸಭೆ ಮಾತ್ರ ನನಗೇನೂ ಸಮ್ಮಂದವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಅನೇಕ ಜನಪ್ರತಿನಿಧಿಗಳೂ ಸಹ ಪ್ರತಿ ದಿನ ಇದೆ ರಸ್ತೆ ಮೂಲಕ ಸಂಚರಿಸುತ್ತಾರೆ. ಇವರ ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ.ಆದಷ್ಟು ಬೇಗ ಒಡೆದ ಪೈಪ ಲೈನ್ ದುರಸ್ತಿ ಮಾಡಿ ಸಾರ್ವಜನಿಕರ ಆರೋಗ್ಯ ಕಾಪಾಡಿ. ಇನ್ನೊಂದು ವಿಷಯ ಅಧಿಕಾರಿಗಳ ಗಮನಕ್ಕೆ ಏನೆಂದರೆ ಪಾದಚಾರಿಗಳು, ಬೈಕ್ ಮತ್ತು ಸೈಕಲ್ ಸವಾರರು ಈ ಮಾರ್ಗ ಮೂಲಕ ಸಾಗುವಾಗ ರಭಸದಿಂದ ಬರುವ ದೊಡ್ಡ ದೊಡ್ಡ ವಾಹನಗಳಿಂದ ರಾಡಿ ನೀರು ಉಗ್ಗಿ ಒಳ್ಳೆಯ ಬಟ್ಟೆಗಳು ಸಹ ಹೊಲಸಾಗಿ ಅವರಿಗೆ ಕಿರಿಕಿರಿ ಉಂಟಾಗುತ್ತಿದೆ.