ಪರಿಹಾರಕ್ಕೆ ಆಗ್ರಹಿಸಿ ಹಾಲು ಸಂಸ್ಕರಣ ಕೇಂದ್ರಕ್ಕೆ ರೈತರ ಘೇರಾವ್
ಮಹಾಲಿಂಗಪುರ 19: ಹಾಲು ಕಡಿಮೆ ಗುಣಮಟ್ಟ ಹೊಂದಿದೆಯೆಂಬ ನೆಪವೊಡ್ಡಿ, ಅಂದಾಜು 15 ಹಾಲಿನ ಸೊಸೈಟಿಗಳ ವೇತನ ಪಾವತಿಸಿಲ್ಲವೆಂದು ರೈತರು ಆಕ್ರೋಶಿತರಾಗಿ ಪಟ್ಟಣದಲ್ಲಿರುವ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ (ನಂದಿನಿ) ಹಾಲು ಸಂಸ್ಕರಣ ಕೇಂದ್ರಕ್ಕೆ ಘೇರಾವು ಹಾಕಿ ಪರಿಹಾರಕ್ಕೆ ಆಗ್ರಹಿಸಿದರು.
ರೈತ ಮುಖಂಡ ಸಂಗಾನಟ್ಟಿ ಗ್ರಾಮದ ಸಿದ್ದು ನಾಗಪ್ಪ ಉಳ್ಳಾಗಡ್ಡಿ ಹೇಳುವಂತೆ, ರಾಜ್ಯದ ರೈತರು ಹಲವು ದಶಕಗಳಿಂದ ಕೆಎಂಎಫ್ ಗೆ ಹಾಲನ್ನು ಒದಗಿಸುತ್ತಿದ್ದಾರೆ. ಇದರಿಂದ ಸರ್ಕಾರ ಬೆಣ್ಣೆ, ತುಪ್ಪ, ಮೊಸರು, ಹಾಲು, ಪನೀರ್, ಪೇಡೆ, ಬಾಲುಶಾ, ಬಿಸ್ಕೆಟ್ ಇತ್ಯಾದಿ ಇತ್ಯಾದಿಯಾಗಿ ಅನೇಕ ಉತ್ಪನ್ನಗಳನ್ನು ತಯಾರಿಸಿ ನಿಗಮವು ವ್ಯವಹಾರ ಮಾಡುತ್ತ ಲಾಭದಾಯಕ ಸಂಸ್ಥೆಯಾಗಿದೆ. ಅಲ್ಲದೆ ರಾಜ್ಯಾದ್ಯಂತ ಲಕ್ಷಾಂತರ ಜನರು ಇದರಲ್ಲಿ ತೊಡಗಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.ಇದರ ಶ್ರೇಯ ಮಾತ್ರ ರೈತರಿಗೆ ಸಲ್ಲಬೇಕು ಹಾಗಾಗದೇ ಇವರು ನೆಪಕ್ಕೆ ಮಾತ್ರ ಎಂಬಂತಾಗಿದೆ.
ಪ್ರಸ್ತುತ ಕಾಲಮಾನದಲ್ಲಿ 01ಲೀಟರ್ ನೀರಿಗೆ 20/25ರೂ ಆಗಿದ್ದು, ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿ ಇಡೀ ಪರಿವಾರವೆಲ್ಲ ತೊಡಗಿ ಹಾಲನ್ನು ನಿಗಮಕ್ಕೆ ಲೀ. ಒಂದಕ್ಕೆ19/20ರೂಗಳಿಗೆ ನೀಡುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ. ಒಟ್ಟಾರೆ ತಕ್ಕ ಶ್ರಮಕ್ಕೆ ತಕ್ಕ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಷ್ಟಾದರೂ ಇರಲಿ ಎಂದು ರೈತರು ಶ್ರಮಪಟ್ಟು ಹಾಲನ್ನು ಕೇಂದ್ರಕ್ಕೆ ಒದಗಿಸುತ್ತಿದ್ದು. ಇತ್ತೀಚೆಗೆ ಕೇಂದ್ರದ ನಿರ್ವಾಹಕರು ಹಾಲು( ಫ್ಯಾಟ್ 3.5/ 8.5 ಎಸ್.ಎನ್.ಎಫ ಗಿಂತ ಕೆಳಗೆ ಇದ್ದು) ಕಳಪೆ ಇದೆ ಎಂದು ರೈತರ ಹಾಲನ್ನು ವಾಪಸ್ ಅಥವಾ ಅದಕ್ಕೆ ತಕ್ಕ ಬೆಲೆಯನ್ನೂ ನೀಡದೆ ಅಂದು ಕಾರ್ಯನಿರ್ವಹಿಸುತ್ತಿದ್ದ ಗುದ್ದಲಿ ಸಾಹೇಬರು 15 ಸೊಸೈಟಿಗಳ ಹಾಲಿನ ಬಿಲ್ಲಗಳನ್ನು ಪಾವತಿಸಿಲ್ಲ ಮತ್ತು ಹಾಲಿನ ಗುಣಮಟ್ಟ ಸ್ಥಳದಲ್ಲಿ ಚೆಕ್ ಮಾಡುವುದೇ ಬೇರೆ ಕೇಂದ್ರದಲ್ಲಿ ಆಗುವುದೇ ಬೇರೆ ಹೀಗೇಕೆ ತಾರತಮ್ಯ ? ಎಂಬುವುದನ್ನು ಪ್ರಶ್ನಿಸಿದರೆ ಅಸಮರ್ಪಕ ಉತ್ತರ ನೀಡಿ ನುಣುಚಿಕೊಳ್ಳುತ್ತಾರೆ. ರೈತರ ಜೊತೆ ಪಾರದರ್ಶಕ ವ್ಯವಹಾರವಾಗುತ್ತಿಲ್ಲವೆಂದು ದೂರುತ್ತ, ನಮ್ಮ ಬಿಲ್ಲನ್ನು ಪಾವತಿಸದಿದ್ದರೆ ಎಲ್ಲ ಸೊಸೈಟಿಗಳ ಜನರು ಸೇರಿ ಕೇಂದ್ರ ಕಚೇರಿಯ ಮುಂದೆ ಮುಷ್ಕರ ಹೂಡುತ್ತೇವೆ ಎಂದಾಗ, ಇದಕ್ಕೆ ಸ್ಪಂದಿಸಿದ ಕೇಂದ್ರ ನಾಲ್ಕಾರು ದಿವಸಗಳಲ್ಲಿ ಇದರ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಪ್ಪ ಉಳ್ಳಾಗಡ್ಡಿ, ಸಿದ್ದರಾಮ ಉದ್ದಾರ, ಮಾರುತಿ ಇಟ್ನಾಳ, ಜಗ್ಗೇಶ್ ಹುದ್ದಾರ, ರೇವಪ್ಪ ನಾಗನೂರ್, ಕಲ್ಲಪ್ಪ ಪೂಜಾರಿ, ಚಿದಾನಂದ ಲಾತೂರ್ ಇನ್ನೂ ಮುಂತಾದವರಿದ್ದರು.
ಆಹಾರ ಸಂಸ್ಕರಣಾ ಕಾಯ್ದೆ ಪ್ರಕಾರ ಫ್ಯಾಟ್ 3.5/ 8.5 ಎಸ್ಎನ್ಎಫ್ ಇದ್ದರೆ ಮಾತ್ರ ಸರ್ಕಾರದಿಂದ 5 ರೂಪಾಯಿಗಳ ಪ್ರೋತ್ಸಾಹಧನ ಸಿಗುತ್ತದೆ. ಇಲ್ಲದಿದ್ದರೆ ಅದಕ್ಕೆ ಯಾವುದೇ ಬೆಲೆ ನಿಗದಿ ಇರುವುದಿಲ್ಲ ಹಾಗೂ ಕಳಪೆ ಹಾಲನ್ನು ವಾಪಸ್ ಕೊಡಲಿಕ್ಕೂ ಬರುವುದಿಲ್ಲ.
ಆರ್.ಎಸ್ ಚೌಹಾನ್
ಅಸಿಸ್ಟೆಂಟ್ ಮ್ಯಾನೇಜರ್