ಕಾಗವಾಡ

ಬರಪೀಡಿತ ತಾಲೂಕು ಘೋಷಣೆಗೆ ರೈತರ ಆಗ್ರಹ

ಬರಪೀಡಿತ ತಾಲೂಕು ಘೋಷಣೆಗೆ ರೈತರ ಆಗ್ರಹ

ಲೋಕದರ್ಶನ ವರದಿ 

  ಕಾಗವಾಡ 22: ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿ, ರೈತರ ಪಂಪ್ಸೆಟ್ಗಳಿಗೆ ಹಗಲು ವೇಳೆ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಮಂಗಳವಾರ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಪಿ. ರಾಜೀವ್ ಹಾಗೂ ಮಹೇಶ್ ಕುಮಟಳ್ಳಿ ನೇತೃತ್ವದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದ ರೈತರು, ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು. ಕಾಗವಾಡ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ. ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆ ಕಾಗವಾಡ ತಾಲೂಕಿನಲ್ಲಿ ದಾಖಲಾಗಿದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನದಿ ಭಾಗದ ರೈತರು ಸಾಲ ಮಾಡಿ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ವಿದ್ಯುತ್ಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾಲೂಕನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ, ರೈತರಿಗೆ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಇಂದು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಕಾಗವಾಡ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದ್ದರೂ ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸದೆ ರೈತರಿಗೆ ಅನ್ಯಾಯ ಮಾಡಿದೆ. ಕೂಡಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.  

ತಾಲೂಕನ್ನು ಒಂದು ವಾರದೊಳಗೆ ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಶಿವಾನಂದ ಪಾಟೀಲ, ಅಭಯಕುಮಾರ ಅಕ್ಕಿವಾಟೆ, ದಾದಾ ಪಾಟೀಲ ಸೇರಿದಂತೆ ಹಲವರು ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಅರುಣ ಗಣೇಶವಾಡಿ, ಮುಖಂಡರಾದ ಅಪ್ಪಾಸಾಬ ಅವತಾಡೆ, ನಿಂಗಪ್ಪ ಖೋಕಲೆ, ರಾಮಗೌಡ ಪಾಟೀಲ, ಭೀಮಣ್ಣ ಚೌಗುಲೆ, ಶುಭಂ ಕಾಟಕರ್, ಉಮೇಶ ಮನೋಜ, ಅಪ್ಪಾಸಾಬ ಮಳಮಳಸಿ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು. ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು. 


ಸುದ್ದಿ ಓದಿ