ಹೂವಿನ ಹಡಗಲಿ

ಕಾಲುವೆ ಸ್ವಚ್ಛಗೊಳಿಸಿದ ರೈತರು; ನೀರು ಹರಿಸುವಂತೆ ಒತ್ತಾಯ

ಕಾಲುವೆ ಸ್ವಚ್ಛಗೊಳಿಸಿದ ರೈತರು; ನೀರು ಹರಿಸುವಂತೆ ಒತ್ತಾಯ

ಹೂವಿನಹಡಗಲಿ 28: ತಾಲೂಕಿನ ಮಾಗಳ ಗ್ರಾಮದಲ್ಲಿ ಸಿಂಗಟಾಲೂರು ಎತ್ತಿನೀರಾವರಿ ಯೋಜನೆಯ ಕಾಲುವೆಯಲ್ಲಿ ಗಿಡಗಂಟಿ ಬೆಳೆದು, ಹೂಳು ತುಂಬಿಕೊಂಡ ಪರಿಣಾಮ ನೀರು ಸಮರ​‍್ಕವಾಗಿ ಹರಿಯದೆ ರೈತರಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಕಾಲುವೆ ವ್ಯಾಪ್ತಿಯ ರೈತರು ಸೋಮವಾರ ಸ್ವಯಂಪ್ರೇರಿತವಾಗಿ ಕಾಲುವೆ ಸ್ವಚ್ಛಗೊಳಿಸಿದರು.  

ಕಾಲುವೆಯಲ್ಲಿ ಹೂಳು ಹಾಗೂ ಜಾಲಿ ಪೊದೆಗಳು ಬೆಳೆದಿದ್ದರಿಂದ ನೀರಿನ ಹರಿವು ಸಂಪೂರ್ಣವಾಗಿ ಅಡಚಣೆಯಾಗಿತ್ತು. ಅಲ್ಲದೆ, ಕಾಲುವೆಗಳು ಒಡೆದು ಹಾಳಾಗಿರುವುದರಿಂದ ನೀರು ಬಿಟ್ಟರೂ ಹೊಲಗಳಿಗೆ ಸಮರ​‍್ಕವಾಗಿ ತಲುಪುತ್ತಿಲ್ಲ ಎಂದು ರೈತರು ದೂರಿದರು.  

ಕಾಲುವೆಗಳ ನಿರ್ವಹಣೆ ಮತ್ತು ಸ್ವಚ್ಛತೆ ಕೈಗೊಳ್ಳುವಂತೆ ಸಿಂಗಟಾಲೂರು ಯೋಜನೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಮಾಗಳ ಗ್ರಾಮದ ರೈತರು ತಾವೇ ಶ್ರಮದಾನದ ಮೂಲಕ ಕಾಲುವೆ ಸ್ವಚ್ಛತಾ ಕಾರ್ಯ ಕೈಗೊಂಡರು.  

ಹಿಂದೆ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಕಾಲುವೆಗಳ ಸ್ವಚ್ಛತೆ ನಡೆಸಲಾಗುತ್ತಿತ್ತು. ಆದರೆ ಮಾರ್ಗಸೂಚಿಗಳ ಪ್ರಕಾರ ಐದು ವರ್ಷಗಳವರೆಗೆ ಅದೇ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಲು ಅವಕಾಶ ಇಲ್ಲದ ಕಾರಣ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ ಎಂದು ರೈತರು ತಿಳಿಸಿದರು.  

ಕಾಲುವೆ ವ್ಯಾಪ್ತಿಯಲ್ಲಿ ಬಾಳೆ, ಭತ್ತ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಸಮರ​‍್ಕವಾಗಿ ನೀರು ಹರಿಯುತ್ತಿಲ್ಲ. ನೀರಾವರಿ ಸೌಲಭ್ಯಕ್ಕಾಗಿ ರೈತರೆಲ್ಲರೂ ಸೇರಿ ಶ್ರಮದಾನ ಮಾಡಿ ಕಾಲುವೆ ಸ್ವಚ್ಛಗೊಳಿಸಿದ್ದೇವೆ ಎಂದು ಯಳಮಾಲಿ ನಾಗರಾಜ ಹಾಗೂ ಈಟಿ ಕೋಟೆಪ್ಪ ಹೇಳಿದರು.  

"ಕಾಲುವೆಯನ್ನು ಸ್ವಚ್ಛಗೊಳಿಸಿದ್ದೇವೆ. ಮಳೆ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಮಾಗಳ ಭಾಗದ ಕಾಲುವೆಗಳಿಗೆ ನೀರು ಹರಿಸಬೇಕು" ಎಂದು ರೈತರು ಒತ್ತಾಯಿಸಿದರು.  


ಸುದ್ದಿ ಓದಿ