ರೈತರ ಪಂಪ್ಸೆಟ್ ಕೇಬಲ್ ಕಳವು; ಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹ
ಮುದ್ದೇಬಿಹಾಳ 06: ತಾಲೂಕಿನ ಕವಡಿಮಟ್ಟಿ ಗ್ರಾಮದ ಸಮೀಪ ರೈತರ ಜಮೀನುಗಳಿಗೆ ಅಳವಡಿಸಿದ್ದ ಪಂಪ್ಸೆಟ್ಗಳ ಮುಖ್ಯ ವಿದ್ಯುತ್ ಕೇಬಲ್ಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ರೈತರು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕವಡಿಮಟ್ಟಿ ಗ್ರಾಮದ ಸಮೀಪದ ಚಿಮ್ಮಲಗಿ ಎತ್ತಿನೀರಾವರಿ ಕಾಲುವೆ ವ್ಯಾಪ್ತಿಯ ಸುಮಾರು 10 ಪಂಪ್ಸೆಟ್ಗಳಿಗೆ ಅಳವಡಿಸಿದ್ದ ಮುಖ್ಯ ಕೇಬಲ್ಗಳನ್ನು ಶನಿವಾರ ರಾತ್ರಿ ರೈತರು ಇಲ್ಲದ ಸಮಯದಲ್ಲಿ ಕಳ್ಳರು ಕತ್ತರಿಸಿ ಕೊಂಡೊಯ್ದಿದ್ದಾರೆ. ಇದರಿಂದ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಇದೇ ರೀತಿಯ ಕೇಬಲ್ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಶನಿವಾರ ನಡೆದ ಘಟನೆಯಲ್ಲಿ ಅಂದಾಜು ?30 ಸಾವಿರ ಮೌಲ್ಯದ ಕೇಬಲ್ ಕಳುವಾಗಿದೆ ಎಂದು ರೈತರು ತಿಳಿಸಿದ್ದಾರೆ. ತಾಮ್ರ ತಂತಿಗಾಗಿ ಕಳ್ಳರು ನೆಲದೊಳಗೆ ಅಳವಡಿಸಿದ್ದ ಕೇಬಲ್ಗಳನ್ನೇ ಕಿತ್ತುಕೊಂಡು ಹೋಗುತ್ತಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಪಂಪ್ಸೆಟ್ಗಳ ಕೇಬಲ್ ಕಳವು ಮತ್ತಷ್ಟು ಹೊರೆ ತಂದಿದ್ದು, ಬೆಳೆಗಳಿಗೆ ನೀರುಣಿಸುವ ಕಾರ್ಯಕ್ಕೂ ಅಡಚಣೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಈ ಭಾಗದಲ್ಲಿ ಇಂತಹ ಕಳವು ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.