ತಾಳಿಕೋಟಿ

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ರೈತರ ಧರಣಿ

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ರೈತರ ಧರಣಿ


ತಾಳಿಕೋಟಿ ಸೆ.22: ವಿಜಯಪುರ ಜಿಲ್ಲೆಯ ತಾಳಿಕೋಟಿ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟಿ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ನಡೆಯುತ್ತಿದ್ದ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಂಗಳವಾರ 19ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ತಾಳಿಕೋಟಿ ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರೈತರ ಹಿತಕ್ಕಾಗಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ತಾಳಿಕೋಟಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ವಿಳಂಬ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಮರಣಾಂತ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಹೋರಾಟಗಾರರ ಜೀವಕ್ಕೆ ಹಾನಿಯಾದರೆ ಸರ್ಕಾರವೇ ನೇರ ಹೊಣೆಗಾರವಾಗಬೇಕಾಗುತ್ತದೆ ಎಂದು ಬಾಲಪ್ಪಗೌಡ ಲಿಂಗದಳ್ಳಿ ಎಚ್ಚರಿಸಿದರು. ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಶ್ರೀನಿವಾಸ ಗೊಟಗುಣಕಿ, ಸಂಗನಗೌಡ ಕೋಳೂರು, ಮುತ್ತು ಪಾತರಗೋಳ, ಪ್ರಭಾಕರ ಗುಳಗುಂಟಿ, ಮಲ್ಲನಗೌಡ ಬಿರಾದಾರ, ಸಂಗನಗೌಡ ಟಕ್ಕಳಕಿ, ಶಾಂತಗೌಡ ವಠಾರ, ಗೌಡಪ್ಪ ಕೊಡಗನೂರು, ರಾಮನಗೌಡ ಯಾಳವಾರ, ಅರುಣಕುಮಾರ ತುಂಬಗಿ, ಶಿವರಾಜ ಪಾಟೀಲ, ಗೌಡಪ್ಪ ಲಿಂಗದಳ್ಳಿ, ರಾಮನಗೌಡ ಕೋಳೂರು ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ