ಹೂವಿನ ಹಡಗಲಿ

ವಿದ್ಯುತ್ ವಲಯ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ

ವಿದ್ಯುತ್ ವಲಯ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ

ಹೂವಿನಹಡಗಲಿ 3: ರಾಜ್ಯದಲ್ಲಿ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಹಾಗೂ ಟಾಟಾ ಕಂಪನಿಗೆ ವಿದ್ಯುತ್ ಸರಬರಾಜು ಪರವಾನಗಿ ನೀಡುವ ಪ್ರಸ್ತಾವವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮತ್ತು ಕಾರ್ಯಕರ್ತರು ಗುರುವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  

ಪ್ರತಿಭಟನೆ ಬಳಿಕ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿ, ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ನೀಡುವ ನಿರ್ಧಾರವನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು.  

ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ವಿದ್ಯುತ್ ಸರಬರಾಜು ಸಂಸ್ಥೆಗಳಿದ್ದರೂ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಾರ್ವಜನಿಕ ಹಿತಾಸಕ್ತಿ ಹಾನಿಗೊಳಗಾಗುವುದರ ಜೊತೆಗೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿದರು.  

ರೈತರ ಹಿತದೃಷ್ಟಿಯಿಂದ ವಿದ್ಯುತ್ ವಲಯವನ್ನು ಸಾರ್ವಜನಿಕ ವಲಯದಲ್ಲಿಯೇ ಮುಂದುವರಿಸಬೇಕು ಹಾಗೂ ಕೃಷಿ ಬಳಕೆಯ ರಸಗೊಬ್ಬರಗಳ ಬೆಲೆಯನ್ನು ಇಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

ಪ್ರತಿಭಟನೆಯಲ್ಲಿ ಹಿರೇಹಡಗಲಿ ಹೋಬಳಿ ಅಧ್ಯಕ್ಷ ಕೆ. ದ್ಯಾಮಪ್ಪ, ಉಪಾಧ್ಯಕ್ಷ ಪಿ. ಪ್ರಮೋದ್, ಮೈಲಾರ ರಾಜಪ್ಪ, ಅಂಜಿನಪ್ಪ, ಕೆ. ರಾಮೇಶ್, ಜಿ. ಮಹೇಶ್, ಸಿ. ರಾಮಣ್ಣ, ಟಿ. ಅಶೋಕ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು. 


ಸುದ್ದಿ ಓದಿ