ಆ. 7ರೊಳಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ರೈತ ಸಂಘ ಒತ್ತಾಯ
ಲೋಕದರ್ಶನ ವರದಿ
ಕಂಪ್ಲಿ, ಆ. 3: ತುಂಗಭದ್ರಾ ಮುನಿರಾಬಾದ್ ನೀರಾವರಿ ಕೇಂದ್ರ ಕಚೇರಿಯಲ್ಲಿ ಆಗಸ್ಟ್ 7ರೊಳಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ರೈತರಿಗೆ ತಕ್ಷಣ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ನೇತೃತ್ವದ ನಿಯೋಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಮುನಿರಾಬಾದ್ ನೀರಾವರಿ ಕೇಂದ್ರ ಕಚೇರಿಯಲ್ಲಿ ಅಧೀಕ್ಷಕ ಅಭಿಯಂತರ ಎಸ್.ಜಿ. ಮಲ್ಲಿಗಾರಾವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ನಿಯೋಗ, ಮಳೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ನೀರು ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ. ಗೌಡ, ಈ ಬಾರಿ ಮುಂಗಾರು ತಡವಾಗಿ ಆರಂಭಗೊಂಡು ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಸಂಕಷ್ಟ ಅನುಭವಿಸಿದ್ದರು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಆಶಾಭಾವನೆ ಮೂಡಿದೆ ಎಂದು ಹೇಳಿದರು.
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಸುಮಾರು 45 ಟಿಎಂಸಿ ನೀರು ಸಂಗ್ರಹವಿದ್ದು, ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ಗಿಂತ ಹೆಚ್ಚು ನೀರು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಜಲಾಶಯ ಭರ್ತಿಯಾಗುವ ನೀರೀಕ್ಷೆಯಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಆಗಸ್ಟ್ 7ರೊಳಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಎಲ್ಎಲ್ಸಿ, ಎಚ್ಎಲ್ಸಿ ಹಾಗೂ ತುಂಗಭದ್ರಾ ನದಿ ಪಾತ್ರದ ರೈತರಿಗೆ ಬೆಳೆಗಳಿಗೆ ಅಗತ್ಯವಿರುವ ನೀರನ್ನು ಬಿಡುಗಡೆ ಮಾಡಬೇಕು. ವಿಜಯನಗರ ಕಾಲುವೆ ಸೇರಿದಂತೆ ಇತರೆ ಕಾಲುವೆಗಳ ಮೂಲಕವೂ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 7ರೊಳಗೆ ಸಭೆ ನಡೆಸಿ ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳದಿದ್ದರೆ, ಜಿಲ್ಲೆಯ ರೈತರು ಮುನಿರಾಬಾದ್ ನೀರಾವರಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಖಾಜಾಹುಸೇನ್ ನಿಯಾಜಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.