ಕೆರೆಗಳಿಗೆ ನೀರು ಹರಿಸಲು ರೈತರ ಸಂಘ ಒತ್ತಾಯ
ಹೂವಿನಹಡಗಲಿ 28: ತಾಲೂಕಿನ ಮಾನ್ಯರ ಮಸಾಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಳಕಟ್ಟಿ ತಾಂಡ ಕೆರೆಗೆ ನೀರು ತುಂಬಿಸಿ, ಕಾಲುವೆಗಳ ಮೂಲಕ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸಿಂಗಟಾಲೂರು ಎತ್ತಿನೀರಾವರಿ ಯೋಜನೆಯ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಸಂಪೂರ್ಣ ಬತ್ತಿದ್ದು, ದನ-ಕರುಗಳು ಹಾಗೂ ಪಕ್ಷಿ-ಪ್ರಾಣಿಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸರ್ಕಾರ ಕೆರೆಗಳಿಗೆ ಕೂಡಲೇ ನೀರು ಹರಿಸುವಂತೆ ಈಗಾಗಲೇ ಆದೇಶ ನೀಡಿದ್ದರೂ, ಇದುವರೆಗೆ ಸಮರ್ಕವಾಗಿ ನೀರು ಬಿಡಲಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಮಸಾಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಳಕಟ್ಟಿ ತಾಂಡ ಕೆರೆ ಸೇರಿದಂತೆ ತಾಲೂಕಿನ ಇತರೆ ಕೆರೆಗಳಿಗೂ ತಕ್ಷಣ ನೀರು ಹರಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ಕೆ. ಮಂಜುನಾಥಪುರ, ತಾಲೂಕು ಉಪಾಧ್ಯಕ್ಷ ವಿಠಲ್ ನಾಯಕ್, ಸಲಹಾ ಸಮಿತಿ ಸದಸ್ಯ ಮುಜ್ಜು ರೆಹಮಾನ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಸಂಘಟನಾ ಕಾರ್ಯದರ್ಶಿ ಗೀರೀಶ್, ಕೆ.ಕೆ. ತಾಂಡ ಗ್ರಾಮ ಘಟಕದ ಅಧ್ಯಕ್ಷ ಶೇಖರ್ ನಾಯಕ್ ಹಾಗೂ ಕಾರ್ಯದರ್ಶಿ ಎಂ.ಕೆ. ನಾಯಕ್ ಉಪಸ್ಥಿತರಿದ್ದರು.