ಕಾರವಾರ

ಮುಂಡಗೋಡು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತ ಸಂಘ ಆಗ್ರಹ

ಮುಂಡಗೋಡು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತ ಸಂಘ ಆಗ್ರಹ

ಮುಂಡಗೋಡು 17: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಮುಂಡಗೋಡು ತಾಲೂಕಿನ ವಿವಿಧ ಭಾಗಗಳಲ್ಲಿ ಬಿತ್ತನೆಯಾದ ಬೆಳೆಗಳು ಒಣಗಿ ಕರಕಲಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.  

ಶುಕ್ರವಾರ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಸರ್ಕಾರ ಕೂಡಲೇ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರೀಶೀಲಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಲಾಗಿದೆ.  

ಪ್ರತಿ ವರ್ಷದಂತೆ ರೈತರು ಬ್ಯಾಂಕುಗಳಿಂದ ಸಾಲ ಪಡೆದು ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಪ್ರೀಮಿಯಂ ಸಹ ಪಾವತಿಸಿದ್ದಾರೆ. ಆದರೆ ಮಳೆಯ ಕೊರತೆಯಿಂದ ಬಹುತೇಕ ಬೆಳೆಗಳು ಹಾನಿಗೊಳಗಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.  

ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿಯ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಆಧಾರದ ಮೇಲೆ ರೈತರಿಗೆ ತ್ವರಿತ ಪರಿಹಾರ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.  

ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕು. ಫಸಲ್ ಬಿಮಾ ಯೋಜನೆಯಡಿ ರೈತರಿಗೆ ದೊರೆಯಬೇಕಾದ ವಿಮಾ ಪರಿಹಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಮಾ ಕಂಪನಿಗಳಿಂದ ತಕ್ಷಣ ಬಿಡುಗಡೆಗೊಳಿಸಬೇಕು. ರೈತರಿಂದ ಪ್ರತಿ ವರ್ಷ ಪ್ರೀಮಿಯಂ ಸಂಗ್ರಹಿಸಿ, ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ನೀಡಲು ವಿಳಂಬ ಮಾಡುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.  

ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳು ರೈತರಿಂದ ಸಾಲ ಮರುಪಾವತಿಗೆ ಒತ್ತಡ ಹೇರಬಾರದು. ರೈತರಿಗೆ ಸಾಲ ಮರುಪಾವತಿಯಲ್ಲಿ ವಿನಾಯಿತಿ ನೀಡಿ ಮಾನವೀಯತೆ ತೋರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.  

ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಪೀರಜ್ಜ ಸಾಗರ, ರಾಜು ಗುಬ್ಬಕ್ಕನವರ, ಶಿವಾನಂದ ಕುರುಬರ, ಬಸಪ್ಪ ಗಲಬಿ, ವಿಜಯ ಲಮಾಣಿ, ಎಸ್‌.ಎಸ್‌. ಪಾಟೀಲ, ಹುಲಿಯಪ್ಪ ಕರೇಗೌಡ್ರ, ವಿರೂಪಾಕ್ಷ ಸಾಗರ, ರವಿ ಬೋಕಿಯವರ, ಪರಶುರಾಮ ಬಾಳಣ್ಣವರ, ಕಮಲಭಾಷ ಕಿರಿಮನಿ, ಗೀರೀಶ ಗೋಣೆನವರ, ಹೇಮಲಪ್ಪ ಲಮಾಣಿ, ಹನುಮಂತ ಗುಟ್ಟಲ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ