ಕುಡತಿನಿಯಲ್ಲಿ ಬಂಧಿಸಿದ ರೈತ ಹೋರಾಟಗಾರು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಬಂಧಿ : ಇಬ್ಬರ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು : ಆರೋಗ್ಯ ವಿಚಾರಿಸಿದ ಶಾಸಕ ಜೆ.ಎನ್.ಗಣೇಶ
ಲೋಕದರ್ಶನ ವರದಿ
ಕಂಪ್ಲಿ 28: ಕೆಐಡಿಬಿ ವಶಪಡಿಸಿಕೊಂಡ ರೈತರ ಜಮೀನುಗಳಿಗೆ ನ್ಯಾಯಯುತ ಭೂ ಬೆಲೆ ನೀಡಬೇಕು. ಮತ್ತು ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆ ಮಾಡುವುದನ್ನು ವಿರೋಧಿಸಿ, ರೈತರಿಗೆ ನ್ಯಾಯಾ ಒದಗಿಸಿಸಿಕೊಡಬೇಕೆಂದು ಕುಡತಿನಿಯಲ್ಲಿ ಸೋಮವಾರ ಹೋರಾಟಕ್ಕಿಳಿದಿದ್ದ ನೂರಾರು ಜನ ರೈತ ಹೋರಾಟಗಾರರನ್ನು ವಶಕ್ಕೆ ಪಡೆದ ಖಾಕಿ, ಕೆಲ ರೈತರನ್ನು ಕಂಪ್ಲಿಗೆ ಠಾಣೆಗೆ ಕರೆತಂದು, ಬಂಧಿಸಿಟ್ಟಿರುವುದು ಕಂಡು ಬಂದಿದೆ. ಹಲವು ವರ್ಷಗಳ ಹಿಂದೆ ಕಾರ್ಖಾನೆ ಸ್ಥಾಪನೆಗೆಂದು, ಸಾವಿರಾರು ಎಕರೆ ಭೂಮಿ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ, ಇಷ್ಡು ವರ್ಷಗಳಾದರೂ ಯಾವುದೇ ಕಾರ್ಖಾನೆ ಸ್ಥಾಪನೆ ಮಾಡದೇ, ಉದ್ಯೋಗ ನೀಡದೇ ಕಾಲಹರಣ ಮಾಡಿ, ಈಗ ಜಿಂದಲ್‌ಗೆ ಪರಭಾರೆ ಮಾಡಲು ಹೊರಟಿರುವ ರಾಜ್ಯ ಸರ್ಕಾರ ನಡೆ ಖಂಡಿಸಿ, ಸಾವಿರಾರು ಸಂಖ್ಯೆಯಲ್ಲಿ ರೈತರು ಹೋರಾಟಕ್ಕೆ ಇಳಿದಿದ್ದರು.
ಸತತ 1200 ದಿನಗಳ ಕಾಲ ಹೋರಾಟ ಮಾಡಿಕೊಂಡು ಬಂದ ರೈತರ ಹೋರಾಟ ಉಗ್ರ ರೂಪಕ್ಕೆ ತಾಳಿತ್ತು. ಇಲ್ಲಿನ ಹೋರಾಟದ ಕಿಚ್ಚು ಇನ್ನೂ ಪ್ರಜ್ವಲಿಸಲಿದೆ ಎಂಬುದನ್ನ ಮನಗಂಡ ಪೊಲೀಸರು 500ಕ್ಕೂ ಹೆಚ್ಚು ರೈತರನ್ನು ಬಂಧಿಸಿದ್ದಾರೆ. ಕೆಲವರನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹತ್ತಿರ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ. ಮತ್ತು ನೂರಾರು ರೈತರನ್ನು ಕಂಪ್ಲಿ ಠಾಣೆಗೆ ರಿಜರ್ವ್ ವಾಹನದಲ್ಲಿ ಕರೆತಂದು ವಶದಲ್ಲಿಟ್ಟುಕೊಳ್ಳಲಾಗಿದೆ. ಹೋರಾಟಕ್ಕಿಳಿದಾಗಿನಿಂದಲೂ ನೀರು, ಊಟ ಇಲ್ಲದೇ ರೈತರನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿದೆ ಎಂಬ ಆರೋಪಗಳು ಕೇಳಿ ಬಂದವು. ಬಂಧಿತ ಇಬ್ಬರ ಆರೋಗ್ಯದಲ್ಲಿ ಅಸ್ತವ್ಯಸ್ತ : ಕುಡತಿನಿಯಲ್ಲಿ ಬಂಧಿತ ಹೋರಾಟಗಾರರನ್ನು ಕಂಪ್ಲಿ ಠಾಣೆಯಲ್ಲಿ ಕೂಡಿಡಲಾಗಿದೆ. ಬಂಧಿತ ಹೋರಾಟಗಾರರಲ್ಲಿ ಇಬ್ಬರಿಗೆ ಆರೋಗ್ಯದ ಅಸ್ತವ್ಯಸ್ತ ಕಂಡು ಬಂದಿದೆ.
ನಂತರ ರೈತ ಜಗಾಡೆ ಬಸಪ್ಪ, ಲಕ್ಷ್ಮೀ ಇವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈಗ ಗುಣಮುಖರಾಗಿದ್ದಾರೆ ಎನ್ನಲಾಗುತ್ತಿದೆ. ಆಸ್ಪತ್ರೆಗೆ ಶಾಸಕ ಗಣೇಶ್ ಭೇಟಿ : ಕುಡತಿನಿ ಹೋರಾಟದಲ್ಲಿ ಬಂಧಿತರಾದ ಸಾಕಷ್ಟು ರೈತರನ್ನು ಕಂಪ್ಲಿ ಠಾಣೆಗೆ ಕರೆತಂದಿದ್ದು, ಇಬ್ಬರ ಆರೋಗ್ಯದಲ್ಲಿ ಏರುಪೇರಾಟ ಪರಿಣಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದು ಮನಗಂಡು ಶಾಸಕ ಜೆ.ಎನ್.ಗಣೇಶ್ ದಿಢೀರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ, ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು. ರೈತ ಹೋರಾಟಗಾರರ ಬಿಡುಗಡೆ : ಕೆಲ ಕಾಲ ಠಾಣೆಯಲ್ಲಿ ಕೂರಿಸಿಕೊಂಡಿದ್ದ ಪೊಲೀಸರು ರಾತ್ರಿ ಎಂಟು ಗಂಟೆ ಸುಮಾರಿಗೆ ಕಂಪ್ಲಿ ಠಾಣೆಯಲ್ಲಿದ್ದ ಎಲ್ಲಾ ರೈತ ಹೋರಾಟಗಾರರನ್ನು ಬಂಧನದಿಂದ ಬಿಡುಗಡೆಗೊಳಿಸಿದ್ದಾರೆ.