ನೇಕಾರರಿಗೆ ಸಕಲ ಸೌಲಭ್ಯ, ಕಾರಜೋಳ ಹೇಳಿಕೆಗೆ ನೇಕಾರರ ಆಕ್ರೋಶ
ಮಹಾಲಿಂಗಪುರ09: ರಾಜ್ಯ ಉಪಮುಖ್ಯಮಂತ್ರಿ ಅಲ್ಲದೆ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಗೋವಿಂದ ಎಂ ಕಾರಜೋಳ ಅವರು ಇತ್ತೀಚೆಗೆ ಪತ್ರಿಕೆ ಹೇಳಿಕೆ ನೀಡಿ, ನೇಕಾರರಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳಿರುವುದು ತೀವ್ರ ಸಂಕಷ್ಟದಲ್ಲಿರುವ ಬಡ ನೇಕಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ನೇಕಾರ ಮುಖಂಡ ಮಲ್ಲಪ್ಪ ಭಾವಿಕಟ್ಟಿ ಪತ್ರಿಕಾಗೋಷ್ಠಿಯಲ್ಲಿ ಸಚಿವರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸದನದಲ್ಲಿ ರಾಜ್ಯದ ಜವಳಿ ಸಚಿವರು, ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಮತ್ತು ಇನ್ನೀತರ ಶಾಸಕರು ನೇಕಾರರ ದಯನೀಯ ಸ್ಥಿತಿಗತಿ ಕುರಿತು ಧ್ವನಿ ಎತ್ತಿರುವುದು ಅಭಿನಂzನೀಯವಾಗಿದೆ.
ಆದರೆ, ನೇಕಾರರು ಹೆಚ್ಚಿಗೆ ಇರುವ ಬಾಗಲಕೋಟ ಉಸ್ತುವಾರಿ ಸಚಿವರ ನೇಕಾರರ ಸ್ಥಿತಿಗತಿ ಚೆನ್ನಾಗಿದೆ ಎನ್ನುವ ಹೇಳಿಕೆಗಳು ಮಾತ್ರ ನೇಕಾರ ಸಮುದಾಯವನ್ನು ದೃತಿಗೆಡುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ 23 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಕಾರರಿಗೆ ಯಾವುದೇ ರೀತಿಯ ಆರೋಗ್ಯ ಭದ್ರತೆ, ಆರ್ಥಿಕ ಸಹಾಯ ಇಲ್ಲ. ಸರ್ಕಾರದಿಂದ ನೇಯ್ದ ಸೀರೆಗಳನ್ನು ಖರೀದಿ ಮಾಡುತ್ತಿಲ್ಲ. ಸಾಲ ಮನ್ನಾ ಪೂರ್ತಿಯಾಗಿ ಜಮಾ ಆಗಿರುವುದಿಲ್ಲ. ನೇಕಾರರ ಸಮ್ಮಾನ ಯೋಜನೆ ಶೇ.50 ರಷ್ಟೂ ಸಂದಾಯ ಆಗಬೇಕಾಗಿದೆ. ರಾಜ್ಯದ ನೇಕಾರರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಅವರು ದೂರಿದರು.
ಹೊಳೆಪ್ಪ ಬಾಡಗಿ, ಶಂಕರ ಸೊನ್ನದ, ಬಸಪ್ಪ ಹೊಸಕೋಟಿ, ರಾಜೇಂದ್ರ ಮಿರ್ಜಿ, ಸಂಗಪ್ಪ ಮುಂಡಗನೂರ, ರಾಜು ಮೂಡಲಗಿ, ಮಹೇಶ ಚಂಡೋಲ, ಶಿವಾನಂದ ಜಮಖಂಡಿ, ರಮೇಶ ನಾಗರಾಳ, ಮಲ್ಲಪ್ಪ ಹಳ್ಳಿ, ಮಹಮ್ಮದ ಹವಾಲದಾರ, ಮಹಾದೇವ ಮುಂಡಗನೂರ, ಶಶಿಧರ ಜಿಡ್ಡಿಮನಿ, ಸುದರ್ಶನ ಲಂಗೋಟಿ, ನವೀನ ಕುಕ್ಕುಗೋಳ, ಶ್ರೀಶೈಲ ಚಿಂಚಖಂಡಿ ಮುಂತಾದ ನೇಕಾರರು ಉಪಸ್ಥಿತರಿದ್ದರು.