ಯಶಸ್ವಿಯಾಗಿ ಜರುಗಿದ ಕಣ್ಣಿನ ತಪಾಸಣಾ ಶಿಬಿರ

ಯಶಸ್ವಿಯಾಗಿ ಜರುಗಿದ ಕಣ್ಣಿನ ತಪಾಸಣಾ ಶಿಬಿರ

ಕೊಲ್ಹಾರ 28 : ಮದರಸಾ ಬೈತುಲ್ ಉಲೂಮ್ ಸಿಂದಗಿ ನೇತೃತ್ವದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪಟ್ಟಣದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು. ಮದರಸಾ ಬೈತುಲ್ ಉಲೂಮ್ ಸಿಂದಗಿಯ ಅಧ್ಯಕ್ಷರಾದ ಅಲ್ಹಾಜ್ ಫಜಲುಲ್ ಹಕ್ ಗಿರಗಾವಿ ಮಾತನಾಡಿ ಮಾನವ ಜನ್ಮ ಎತ್ತಿಬಂದಿರುವ ಮನುಷ್ಯ ಪರೋಪಕಾರದ ಗುಣಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕೊಲ್ಹಾರ ಪಟ್ಟಣದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗುತ್ತಿರುವ ಈ ಕಣ್ಣಿನ ತಪಾಸಣಾ ಶಿಬಿರದ ಸದುಪಯೋಗ ಸರ್ವರೂ ಪಡೆದುಕೊಳ್ಳಬೇಕು ಎಂದ ಅವರು ಕೊಲ್ಹಾರ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಉಳಿವು ಹಾಗೂ ಬೆಳವಣಿಗೆಯಲ್ಲಿ ದಿವಂಗತ ನಬಿಸಾಬ ಹೊನ್ಯಾಳ ಅವರ ಪಾತ್ರ ಅಪಾರವಾಗಿದೆ ಎಂದು ದಿವಂಗತ ನಬಿಸಾಬ ಹೊನ್ಯಾಳ ಅವರ ಕಾರ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಅಮಾನತ್ ಬ್ಯಾಂಕಿನ ಅಧ್ಯಕ್ಷ ಮೊಹಮ್ಮದಸಲೀಂ ಅತ್ತಾರ ಮಾತನಾಡಿ ಸೃಷ್ಟಿಕರ್ತನ ಅನುಗ್ರಹದಿಂದ ಜನಿಸಿರುವ ನಾವುಗಳು ಜೀವನದುದ್ದಕ್ಕೂ ಉತ್ತಮ ಕಾರ್ಯಗಳನ್ನು ಮಾಡುತ್ತಾ ನಮ್ಮ ಸಾಮರ್ಥ್ಯಕ್ಕನುಗಣವಾಗಿ ಸಹಾಯ, ಸಹಕಾರ ನೀಡುತ್ತಾ ಬದುಕು ಸವೆಸಬೇಕು ಎಂದರು.

ಪವಿತ್ರ ರಂಜಾನ್ ತಿಂಗಳಲ್ಲಿ ನೇತ್ರ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿರುವ ಮದರಸಾ ಬೈತುಲ್ ಉಲೂಮ್ ಸಿಂದಗಿಯ ಅಧ್ಯಕ್ಷರಾದ ಅಲ್ಹಾಜ್ ಫಜಲುಲ್ ಹಕ್ ಅವರ ಜನ್ಮಸ್ಥಳವಾದ ಕೊಲ್ಹಾರ ಪಟ್ಟಣದಲ್ಲಿ ಈ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಸಂತೋಷದ ವಿಷಯವಾಗಿದೆ ಜೊತೆಗೆ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದರು.ದಾದಾಪೀರ ವಾಲಿಕಾರ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ ಜಾವೀದ್ ಬೀಳಗಿ, ಅಬ್ದುಲ್ ಪಕಾಲಿ, ದಾದಾ ಕಂಕರಪೀರ, ನೂರ ಕಂಕರಪೀರ, ಅನ್ಸರ್ ಜಮಖಂಡಿ, ಗೈಬುಸಾಬ ಕಂಕರಪೀರ, ಗುಲಾಬ ಪಕಾಲಿ ಹಾಗೂ ಇನ್ನಿತರರು ಇದ್ದರು. 


ಸುದ್ದಿ ಓದಿ