ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ವಿಜೃಂಭಣೆಯ ಜಾತ್ರೆ
ಅಪಘಾತದಲ್ಲಿ ಅಯ್ಯಪ್ಪ ಮಾಲಾಧಾರಿ ಮೃತ ಬಾಲಕನಿಗೆ ದೇವಸ್ಥಾನ
* ಹನಮಂತ ನಾವಿ
ಮಹಾಲಿಂಗಪುರ 16: ಮಕರ ಸಂಕ್ರಮಣದ ಪ್ರಯುಕ್ತ ಪಟ್ಟಣದ ಅಯ್ಯಪ್ಪ ಬಡಾವಣೆಯ ದೇವಸ್ಥಾನದಲ್ಲಿ ಭಾನುವಾರ ವಿಜೃಂಭಣೆಯಿಂದ 17ನೇ ವರ್ಷದ ಅಯ್ಯಪ್ಪ ಸ್ವಾಮಿ ಜಾತ್ರೆ ಜರುಗಿತು.
ಮಧ್ಯಾಹ್ನ ಸಮಿತಿಯ ಸದಸ್ಯರು ಮತ್ತು ಮಾಲಾಧಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾಮಿ ಅಯ್ಯಪ್ಪಗೆ ಹಾಲಿನ ಅಭಿಷೇಕ ನಡೆದು ಪುರುಷರು ಮತ್ತು ಮಹಿಳೆಯರಾದಿಯಾಗಿ ಸಮಸ್ತ ಸದ್ಭಕ್ತರು ಪೂಜೆಯ ಸೊಬಗನ್ನು ಸವಿದರು. ಇದರ ನಂತರ ಸೇವಕ ಸೇವಕಿಯರು ಸೇರಿದ ನೂರಾರು ಅಯ್ಯಪ್ಪ ಭಕ್ತರಿಗೆ ರುಚಿಕರವಾದ ಹಾಲುಗ್ಗಿ, ಅನ್ನ ಮತ್ತು ಸಾಂಬಾರು ಬಡಿಸಿದರು.
ಸನ್ನಿಧಾನ ಸೇರಿದ ರಾಹುಲ್: 2006ರಲ್ಲಿ ಅಂದರೆ 17 ವರ್ಷಗಳ ಹಿಂದೆ ಅಯ್ಯಪ್ಪಸ್ವಾಮಿ ಮಾಲೆಯನ್ನು ಧರಿಸಿದ 5 ವರ್ಷದ ಪೋರ ರಾಹುಲ್ ಮೇತ್ರಿ ದಂಪತಿ (ತಾಯಿ ಗೀತಾಳಿಗೆ) ಒಬ್ಬನೆ ಮಗನಾಗಿದ್ದ. ಸುಮಾರು 14 ಅಯ್ಯಪ್ಪ ಮಾಲಾಧಾರಿಗಳು ಮಹಾಲಿಂಗಪುರ ಪಟ್ಟಣದಲ್ಲಿ 40 ದಿವಸಗಳ ವೃತ್ತ ಮುಗಿಸಿಕೊಂಡು ಕೇರಳದ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಹೋಗಿ ವೃತ ಪೂರ್ಣಗೊಳಿಸಬೇಕಾಗಿತ್ತು. ಈ ಸಮಯದಲ್ಲಿ ದಾವಣಗೆರೆ ಹತ್ತಿರದ ಹಿರಿಯೂರು ಎಂಬ ಸ್ಥಳದಲ್ಲಿ ಬೆಳಗಿನ ಜಾವ 3ಗಂಟೆಗೆ ತಾವಿದ್ದ ಕ್ರೂಸರ್ ವಾಹನ ಭೀಕರ ಅಪಘಾತಕ್ಕೀಡಾಯಿತು. ಈ ಸಮಯದಲ್ಲಿ ಹಲವು ಜನ ಗಂಭೀರ ಗಾಯಗೊಂಡರಲ್ಲದೆ, ಮರಿ ಸ್ವಾಮಿ ರಾಹುಲ್ ಅಸು ನೀಗಿ ಅಯ್ಯಪ್ಪನ ಸನ್ನಿಧಾನ ಸೇರಿದ.
ತಾಯಿ ವೇದನೆ: ಇದ್ದೊಬ್ಬ ಮಗ ರಾಹುಲ್ನಲ್ಲಿ ಉತ್ತಮ ಭವಿಷ್ಯ ಕಂಡಿದ್ದ ತಾಯಿ ಗೀತಾ ಸಾವಿನ ಸುದ್ದಿ ಕೇಳಿ ಹುಚ್ಚಿಯಂತಾದಳು. ಅಷ್ಟೇ ಅಲ್ಲದೆ ಮಹಾಲಿಂಪುರ ಪಟ್ಟಣದ ಅಯ್ಯಪ್ಪ ಸ್ವಾಮಿಗಳು ಮತ್ತು ಜನತೆಯಲ್ಲಿಯೂ ಸಹ ದುಃಖ ಮಡುಗಟ್ಟಿತ್ತು. ನಂತರ ಸಾವರಿಸಿಕೊಂಡು ನನ್ನ ಮಗ ಶಾಶ್ವತ ಅಯ್ಯಪ್ಪ ಸ್ವಾಮಿಯಾಗಿದ್ದಾನೆ, ಇದು ನನಗೆ ಈ ಜನ್ಮದ ಪುಣ್ಯ, ಎಂದು ತನಗೆ ದುಃಖ ಉಮ್ಮಳಿಸಿ ಬಂದರೂ ತಡೆದುಕೊಂಡು ಅಂದು ಜನತೆಯ ಮುಂದೆ ತಾಯಿ ಗೀತಾ ಹೇಳುವ ಸಂದರ್ಭ ಮಾತ್ರ ಮನ ಕಲುಕುವಂತಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರಿ ಸ್ವಾಮಿ ರಾಹುಲ್ಗೆ ಅದ್ಧೂರಿಯ ಮೆರವಣಿಗೆ ನಡೆದಿತ್ತು.
ದೇವಾಲಯ ನಿರ್ಮಾಣಕ್ಕೆ ಪರಿವಾರದ ಕಾಣಿಕೆ: ಈ ಎಲ್ಲ ಬೆಳವಣಿಗೆಗಳನ್ನು ಕಂಡ ಮಹಾಲಿಂಗಪುರ ಪಟ್ಟಣದ ಬಾಟ್ ಪರಿವಾರ ಬಾಲ (ರಾಹುಲ್)
ಅಯ್ಯಪ್ಪನ ಪಾರ್ಥಿವ ಶರೀರದ ಧಪನ ಕಾರ್ಯಕ್ಕೆ ಸಹಕರಿಸಿದಲ್ಲದೆ ತಮ್ಮ ತೋಟದಲ್ಲಿ ಐದು ಗುಂಟೆ ಭೂಮಿಯನ್ನು ಸಹ ನೀಡಿ ಬಾಲ ಅಯ್ಯಪ್ಪ ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇದು ಮಹಾಲಿಂಗಪುರ ಪಟ್ಟಣದಲ್ಲಿಯೇ ಪ್ರಥಮ ಸ್ವಾಮಿ ಅಯ್ಯಪ್ಪ ದೇವಸ್ಥಾನವಾಗಿ, ಎಲ್ಲ ಅಯ್ಯಪ್ಪ ಭಕ್ತರಲ್ಲಿ ಹರ್ಷ ತಂದಿದೆ.
ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯಲಿ ಎಂಬ ಉದ್ದೇಶದಿಂದ ನಮ್ಮ ತಂದೆ ದಿವಂಗತ ಮಹಾಲಿಂಗಪ್ಪ ಬಾಟ್ ತಮ್ಮ ಜೀವಿತಾವಧಿಯಲ್ಲಿಯೇ ಬಾಲ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ 5ಗುಂಟೆ ಜಾಗೆಯನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಇದರ ಆವರಣ ಹಾಗೂ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಮಿತಿ, ಪುರಸಭೆ ಮತ್ತು ಸಾರ್ವಜನಿಕರು ಮನಸ್ಸು ಮಾಡಬೇಕಾಗಿದೆ.
* ಪುತ್ರ ವಿರುಪಾಕ್ಷಿ ಮ. ಬಾಟ್,
ಗಣ್ಯ ವ್ಯಾಪಾರಸ್ಥರು ಮಹಾಲಿಂಗಪುರ