ಮಹಲಿಂಗಪುರ

ಮೈಕೊಡವಿ ನಿಂತರೆ ಯಶಸ್ಸು ಕಟ್ಟಿಟ್ಟ ಬುತ್ತಿ : ಎಸ್‌.ಎಂ.ಮುಲ್ಲಾ

ಮೈಕೊಡವಿ ನಿಂತರೆ ಯಶಸ್ಸು ಕಟ್ಟಿಟ್ಟ ಬುತ್ತಿ : ಎಸ್‌.ಎಂ.ಮುಲ್ಲಾ

ಮಹಾಲಿಂಗಪುರ 22: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಉಳಿದ 32 ದಿನಗಳು ಕೇವಲವಲ್ಲ, ಇಡೀ ವರ್ಷದ ದಿನಗಳಿಗೆ ಸವಾಲೆಸೆಯುವ ದಿನಗಳು, ಕಳೆದ ದಿನಗಳ ಬಗ್ಗೆ ಚಿಂತಿಸದೇ ವರ್ತಮಾನದ ಮೇಲೆ ನಂಬಿಕೆ ಇಟ್ಟು ಒಮ್ಮೆ ಮೈಕೊಡವಿ ನಿಂತರೆ ಯಶಸ್ಸು ಖಂಡಿತ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ.ಮುಲ್ಲಾ ಹೇಳಿದರು.  

ಕ್ಷೇತ್ರ ಶಿಕ್ಷಣಾಧಿಕಾಗಳು ಹಾಗೂ ಪದನಿಮಿತ್ತ ಯೋಜನಾಧಿಕಾರಿಗಳ ಕಾರ್ಯಾಲಯ, ಮುಧೋಳ ಮತ್ತು ಲಯನ್ಸ್‌ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್, ಅಕ್ಷರ ವಿಜ್ಞಾನ ಮತ್ತು ವಾಣಿಜ್ಯ ಪಪೂ ಮಹಾವಿದ್ಯಾಲಯ, ಕಾರ್ಯನಿರತ ಪತ್ರಕರ್ತರ ಸಂಘ, ಮಹಾಲಿಂಗಪುರ ಇವರ ಸಹಯೋಗದಲ್ಲಿ ಬುಧವಾರ ಸ್ಥಳೀಯ ಅಕ್ಷರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆ ಮತ್ತು ಅಕ್ಷರ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಪರೀಕ್ಷೆ ಒಂದು ಹಬ್ಬ, ಸಂಭ್ರಮಿಸಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಗುರಿಯೆಡೆ ನಾನು ನಡೆಯಬೇಕೆಂಬ ಅಚಲ ವಿಶ್ವಾಸದಿಂದ ನಿರ್ಭಯವಾಗಿ ನಿಮ್ಮ ಭವಿಷ್ಯ ದಿಕ್ಕು ಬದಲಾಯಿಸುವ ಪರೀಕ್ಷೆ ಎಂಬ ಹಬ್ಬವನ್ನು ಸಂಭ್ರಮಿಸಿ ಎಂದರು. 

ಲಯನ್ಸ್‌ ಕ್ಲಬ್ ಅಧ್ಯಕ್ಷ ಮಾರುತಿ ಮೇದಾರ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಗೆ ಸಹಕಾರಿಯಾಗಬಲ್ಲ ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುವುದಾಗಿ ಹೇಳಿದರು. 

ಮೈಗೂರು ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಪ್ರೊ.ಎಸ್‌.ಎಂ.ಕುಂಬಾರ ಉನ್ಯಾಸ ನೀಡಿ, ಶಾರೀರಿಕ ವ್ಯಕ್ತಿತ್ವ ದೈವದ ಕೊಡುಗೆ ಅದನ್ನು ಇರುವಂತೆ ಒಪ್ಪಿಕೊಳ್ಳಿ, ನಕಾರಾತ್ಮಕ ಮಾತುಗಳಿಗೆ ಕಿವುಡರಾಗಿಬಿಡಿ, ನಿಮ್ಮ ಆಂತರಿಕ ವಿಕಾಸ ನಿಮ್ಮನ್ನೇ ಅವಲಂಬಿಸಿದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟು ಶ್ರಮಿಸಿದರೆ ಯಶಸ್ಸು ಸಾಧ್ಯ ಎಂದರು. 

ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್,ಛಬ್ಬಿ, ಅಕ್ಷರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ವಿನೋದ ಮೇತ್ರಿ, ಲಯನ್ಸ್‌ ಕ್ಲಬ್ ಕಾರ್ಯದರ್ಶಿ ಡಾ.ಶಕುಂತಲಾ ಸಂಶಿ, ಖಜಾಂಚಿ ರಾಜು ಡಾಂಗೆ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಲಯನ್ಸ್‌ ಕ್ಲಬ್ ಪ್ರಥಮ ಅಧ್ಯಕ್ಷ ಡಾ,ವಿಶ್ವನಾಥ ಗುಂಡಾ ಮತ್ತು ಮಹಾಲಿಂಗಪುರ ವಲಯದ 19 ಪ್ರೌಢ ಶಾಲೆಗಳ 12 ನೂರಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಸಂವಾದ ನಡೆಸಿದರು. 

ಅಕ್ಷರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆಯ ಕು.ಶ್ರೇಯಾ ಓಲೇಕಾರ ಮತ್ತು ಸಂಗಡಿಗರು ಪ್ರಾರ್ಥಿಸಿ, ಎಸ್‌ಎಸ್‌ಎಲ್‌ಸಿ ನೋಡಲ್ ಸಂಗಮೇಶ ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಆರ್‌ಪಿ ಎಸ್‌.ಎನ್‌.ಬ್ಯಾಳಿ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. 


ಸುದ್ದಿ ಓದಿ