ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ: ಜಿಪಂ ಸಿಇಒ
ಪಂಜು, ಮೇಣದ ಬತ್ತಿ ಹಿಡಿದು ಮತದಾನ ಜಾಗೃತಿ
ಬಳ್ಳಾರಿ,ಮೇ.04: ಮೇ 07 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮತ ಚಲಾವಣೆ ಮಾಡಿದರೆ, ಜಿಲ್ಲೆಯ ಶೇಕಡವಾರು ಮತದಾನ ಪ್ರಮಾಣವೂ ಹೆಚ್ಚಳವಾಗುತ್ತದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣ ಹೆಚ್ಚಳ ಹಾಗೂ ನೈತಿಕ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಮಿತ್ತ ಶುಕ್ರವಾರದಂದು ನಗರದ ಮಹಾನಗರ ಪಾಲಿಕೆ ಆವರಣದಿಂದ ಏರಿ್ಡಸಿದ್ದ ಪಂಜಿನ ಹಾಗೂ ಮೇಣದ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಬಾರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಮತದಾನ ಕುರಿತು ಅರಿವು ಮೂಡಿಸಲಾಗಿದ್ದು, ಖಂಡಿತವಾಗಿಯೂ ಈ ಬಾರಿ ಶೇಕಡವಾರು ಮತದಾನ ಪ್ರಮಾಣ ಶೇ.85 ರಿಂದ 90 ರಷ್ಟು ಪ್ರಮಾಣ ಹೆಚ್ಚಳವಾಗುವ ನೀರೀಕ್ಷೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಯಾರೂ ಕೂಡ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದೆ ತಪ್ಪದೇ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದರು.ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.ಮೆರವಣಿಗೆ ಸಾಗುವ ಮಾರ್ಗದಲ್ಲಿನ ಸಾರ್ವಜನಿಕರು, ಪಂಜು ಹಾಗೂ ಮೇಣದಬತ್ತಿ ಹಿಡಿದು ಘೋಷಣೆ ಹಾಕುತ್ತಿದ್ದುದನ್ನು ಕುತೂಹಲದಿಂದ ವೀಕ್ಷಿಸಿದರು. ಮತದಾರರಲ್ಲಿ ಮತದಾನದ ಮಹತ್ವ ಸಾರಲು ವಿವಿಧ ಕಾರ್ಯಕ್ರಮಗಳ ಮೂಲಕ ಕಸರತ್ತು ನಡೆಸುತ್ತಿರುವ ಸ್ವೀಪ್ ಸಮಿತಿಯಿಂದ ಶುಕ್ರವಾರ ಏರಿ್ಡಸಿದ ಪಂಜಿನ ಮೆರವಣಿಗೆ ನಿಜಕ್ಕೂ ವಿಶಿಷ್ಟವಾಗಿತ್ತು.ಡೊಳ್ಳು ಕುಣಿತದ ಮೂಲಕ ಪಂಜಿನ ಮೆರವಣಿಗೆಯು ಮಹಾನಗರ ಪಾಲಿಕೆ ಕಚೇರಿ ಆವರಣದಿಂದ ಪ್ರಾರಂಭವಾಗಿ ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಪೊಲೀಸ್ ಠಾಣೆ ಮುಂಭಾಗದಿಂದ ಹೆಚ್.ಆರ್.ಗವಿಯಪ್ಪ ವೃತ್ತದವರೆಗೆ ಆಗಮಿಸಿ ಅಂತ್ಯಗೊಂಡಿತು.
ಜಿಲ್ಲಾ ಪಂಚಾಯತ್ನ ಮುಖ್ಯ ಯೋಜನಾಧಿಕಾರಿ ವಾಗೇಶ್ ಶಿವಾಚಾರ್ಯ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿಯವರು ಸೇರಿದಂತೆ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.