ಎಲ್ಲ ಸಮುದಾಯಗಳ ಆರ್ಥಿಕ ಬೆಳವಣಿಗೆಗಾಗಿ ಬ್ಯಾಂಕ್ ಸ್ಥಾಪಿಸಿ: ಅಲ್ಲಾಪೂರ
ಸಿಂದಗಿ16: ಸಣ್ಣ ಸಮಾಜವಾಗಿದ್ದರೂ ಕಾಯಕ ವೃತ್ತಿ ಜೊತೆಗೆ ಎಲ್ಲ ಸಮುದಾಯಗಳ ಆರ್ಥಿಕ ಬೆಳವಣಿಗೆಗಾಗಿ ಬ್ಯಾಂಕ್ ಸ್ಥಾಪಿಸಿ, ಅದನ್ನು ಯಶಸ್ವಿ ಪಥದಲ್ಲಿ ಮುನ್ನೆಡಿಸಿರುವ ಹಡಪದ ಅಪ್ಪಣ್ಣ ಸಮಾಜ ಬಂಧುಗಳ ಕಾರ್ಯ ಸ್ತುತ್ಯಾರ್ಹ ಎಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.
ಪಟ್ಟಣದ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಸಂಘದ 16ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಮುಖ್ಯಅತಿಥಿಯಾಗಿ ಮಾತನಾಡಿದರು.
ಸಿಂದಗಿ ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘಗಳು ಸೇರಿದಂತೆ ಅನೇಕ ಹಣಕಾಸು ಸಂಸ್ಥೆಗಳಿದ್ದರೂ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಸಂಘದ ಮೇಲೆ ಜನರು ವಿಶ್ವಾಸವನಿಟ್ಟು ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಈ ಸಂಘವು ಉತ್ತರೋತ್ತರವಾಗಿ ಬೆಳೆಯುತ್ತಿದೆ. ಇದರಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸೇವೆ ಶ್ಲಾಘನೀಯವಾದದ್ದು ಎಂದರು.
ಸಂಘದ ಅಧ್ಯಕ್ಷ ಶಿವಾನಂದ ಹಡಪದ ಮಾತನಾಡುತ್ತಾ 15ವರ್ಷಗಳ ಹಿಂದೆ ಕೇವಲ 7.69ಲಕ್ಷ ರೂ.ಶೇರು ಬಂಡವಳಾದೊಂದಿಗೆ ಆರಂಭವಾದ ನಮ್ಮ ಸಂಘವು ಪ್ರಸ್ತುತ 5.67ಕೋಟಿ ರೂ. ಸಾಲ ವಿತರಣೆ ಮಾಡಿದೆ. ಸಮರ್ಕ ಸಾಲ ನಿರ್ವಹಣೆ ಸಮಯೋಜಿತ ಸಂಪನ್ಮೂಲಗಳ ಹೂಡಿಕೆ ಹಾಗೂ ಖರ್ಚುಗಳ ಮೇಲೆ ಹಿಡಿತ ಸಾಧಿಸಿ 25.82ಲಕ್ಷ ರೂ.ನಿವ್ವಳ ಲಾಭ ಗಳಿಸಿರುವುದು ಹೆಮ್ಮೆ ಸಂಗತಿಯಾಗಿದೆ. ಹೀಗೆ ಸಂಘವು ಪ್ರಗತಿಯತ್ತ ಮುನ್ನೆಡೆಯುವಲ್ಲಿ ಸದಸ್ಯರ ಸಹಕಾರ, ವಿಶ್ವಾಸ ಮತ್ತು ನಂಬಿಕೆ ದೊಡ್ಡದು ಎಂದರು.
ಸಂಘದ ಸದಸ್ಯರಲ್ಲಿ ಯಾರಾದರೂ ಅಪಘಾತಕ್ಕೀಡಾಗಿ ಸಾವನ್ನಪ್ಪಿದರೆ ಅಂತಹ ಸದಸ್ಯರ ಕುಟುಂಬಕ್ಕೆ 1ಲಕ್ಷ ರೂ. ಅಪಘಾತ ವಿಮೆ ಹಣವನ್ನು ನೀಡಲಾಗುತ್ತಿದೆ. ಅದೇ ರೀತಿ ಸದಸ್ಯರು ಸಹಜವಾಗಿ ನಿಧನ ಹೊಂದಿದರೆ ಅವರ ಅಂತ್ಯಕ್ರಿಯೆಗಾಗಿ ತಕ್ಷಣವೇ 5ಸಾವಿರ ರೂ. ಸಂಘದಿಂದ ನೀಡುತ್ತಿದ್ದೇವೆ. ಆ ಮೂಲಕ ಸದಸ್ಯರೊಂದಿಗೆ ಸಂಘವು ಹಣಕಾಸಿನ ವ್ಯವಹಾರದ ಜೊತೆಗೆ ಮಾನವೀಯ ಕಳಕಳಿ ಮೂಲಕ ಸದಸ್ಯರುಗಳ ಕುಟುಂಬ ಹಿತ ಬಯಸುತ್ತದೆ ಎಂದರಲ್ಲದೇ ಬೆರಳೆಣಿಕೆ ವರ್ಷದಲ್ಲಿ ಸಂಘವು ಸ್ವಂತ ಕಟ್ಟಡವನ್ನು ಹೊಂದಲಿದೆ. ಅದಕ್ಕಾಗಿ ಖಾಲಿ ನಿವೇಶನವನ್ನು ಖರೀದಿ ಮಾಡಿದ್ದು, ಕಟ್ಟಡ ನಿರ್ಮಿಸಲು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲು ಹಡಪದ(ಹಳಿಮನಿ) ಅವರು ಅಢಾವೆ ಪತ್ರಿಕೆಯನ್ನು ಮಂಡಿಸಿದರು.
ನಿರ್ದೇಶಕರುಗಳಾದ ಶ್ರೀಶೈಲ ಹಡಪದ, ಕಂಠೆಪ್ಪ ಹಡಪದ, ಶಿವಶರಣ ಸಿಂದಗಿ, ಚಿದಾನಂದ ಹಡಪದ, ಸುಭಾಸ ದೇವರನಾವದಗಿ, ಲಕ್ಷ್ಮಣ ನಾವಿ, ಸುರೇಶ ಶಿಂಧೆ, ವಿಜಯಲಕ್ಷ್ಮೀ ಕಾಶೆ, ಮಂಜುಶ್ರೀ ಹಡಪದ, ವಿಜಯಲಕ್ಷ್ಮೀ ಹಡಪದ ವೇದಿಕೆ ಮೇಲಿದ್ದರು.
ಸಭೆಯಲ್ಲಿ ಸಂಘದ ಸದಸ್ಯರುಗಳಾದ ಗುರಣ್ಣ ಶಹಾಪೂರ, ರಾಮು ಗೋರವಗುಂಡಗಿ, ಮಂಜು ಹಡಪದ, ವೆಂಕಟೇಶ ಶಿಂಧೆ, ಉಮೇಶ ಹಡಪದ, ರಾಜು ಆಹೇರಿ, ಬಂದೇನಮಾಜ ಕರ್ಜಗಿ, ಶರಣಪ್ಪ ಹಡಪದ, ಭೀಮರಾಯ ನಾವಿ, ಕವಿತಾ ಯಡ್ರಾಮಿ, ಮಹಾದೇವಿ ಹಡಪದ, ನಿರ್ಮಲಾ ಸಿಂದಗಿ, ಸಿಬ್ಬಂದಿಗಳಾದ ವಿದ್ಯಾ ನಾವಿ, ರಾಹುಲ್ ಹಿಂಚಗೇರಿ, ಕೆ.ಎಸ್.ನಾವಿ, ಜಿ.ಎಸ್.ಪಾಟೀಲ, ಎಸ್.ಎನ್.ವಾಲೀಕಾರ, ಎಂ.ಆರ್.ಮದರ್ಖಾನ, ಶರಣಪ್ಪ ಕೂಕನೂರ ಸೇರಿದಂತೆ ಅನೇಕರಿದ್ದರು.
ನಿರ್ದೇಶಕ ರಾಜು ನಾವಿ, ಸಿಬ್ಬಂದಿಗಳಾದ ಪ್ರವೀಣ ಹಡಪದ, ಭಾಗಣ್ಣ ಹಡಪದ ಕಾರ್ಯಕ್ರಮ ನಿರ್ವಹಿಸಿದರು.