ನಾಡಿನ ಹಸಿರು ಭವಿಷ್ಯಕ್ಕೆ ಪರಿಸರ ಅರಿವು ಜಾಗೃತಿ ಅಗತ್ಯ - ಪ್ರಕಾಶ್ ಕೋಳಿವಾಡ
ರಾಣೆಬೆನ್ನೂರು 10 : ಇಂದಿನ ಅಧಿಕ ತಾಪಮಾನದಿಂದ ಮಾನವನ ಬದುಕು ದುಸ್ತರವಾಗುತ್ತಲ್ಲಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರು ನಮ್ಮ ದೂರದೃಷ್ಟಿಯ ಮೂಲಕ, ನಿತ್ಯದ ಬದುಕಿನಲ್ಲಿ ಪರಿಸರ ಸಂರಕ್ಷಣೆ ಮಾಡಲು ಮೊದಲ ಆದ್ಯತೆಯಾಗಿ ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ನೆರವೇರಿಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ನಗರ ಹೊರವಲಯದ ರಾಣೆಬೆನ್ನೂರು ತಾಲೂಕ ಶಿಕ್ಷಣ ಸಂಸ್ಥೆಯ ಕಲಾ ವಿಜ್ಞಾನ ವಾಣಿಜ್ಯ ಪದವಿ ವಿದ್ಯಾಲಯವು ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಸ್ವಾರ್ಥ, ದುರಾಸೆ, ಅತಿಯಾಶೆ ಕಾರಣ ಇಂದು ನಮ್ಮದೇಶ ಮತ್ತು ನಾಡಿನ ವಿಫುಲ ಅರಣ್ಯ ಸಂಪತ್ತು ಇಲ್ಲದಂತಾಗಿದೆ. ಇದರ ಪರಿಣಾಮ ಮಾನಸಿಕ ಶಾಂತಿ ಮತ್ತು ನೆಮ್ಮದಿ ಇಲ್ಲದೆ ಜೀವನ ಸಾಗಿಸುವಂಥಾಗಿದೆ. ಆದ್ದರಿಂದ ಇಂದಿನಿಂದಲೇ ಪ್ರತಿಯೊಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ಕೋಳಿವಾಡ ಅವರು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ರಾಮರೆಡ್ಡಿ.ಎಸ್ ರೆಡ್ಡೇರ ಅವರು, ಪರಿಸರ ವಿನಾಶದಿಂದ ಜೀವನ ಬದುಕು ಸಂಪೂರ್ಣ ವಿನಾಶವಾದಂತೆ ಎನ್ನುವ ಸತ್ಯದ ಅರಿವು ಇಲ್ಲದೆ ಹೋದರೆ, ಇಂದು ಅನುಭವಿಸುತ್ತಿರುವ ತಾಪಮಾನವು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗಿ ಅನುಭವಿಸಬೇಕಾಗುತ್ತದೆ,
ಕೂಡಲೆ ಪರಿಸರ ಸಂರಕ್ಷಣೆ ಕುರಿತು ನಾವೆಲ್ಲರೂ ಪರಿಸರದಲ್ಲಿ ಸಮರೋಪಾದಿಯಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು. ವಲಯ ಅರಣ್ಯ ಅಧಿಕಾರಿ ಮಹೇಶ್ ನಾಯಕ ಅವರು ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ವಲಯ ಅರಣ್ಯ ಅಧಿಕಾರಿ ಮಂಕಣಿ, ಸತೀಶ್ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಅಧ್ಯಾಪಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಿಸರ ದಿನಾಚರಣೆ ನಿಮಿತ್ತ ವಿವಿಧ ಪ್ರಭೇಧಗಳ ನೂರಾರು ಸಸಿಗಳನ್ನು ನೆಡುವುದರ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು. ಅಲ್ಲದೆ ನೆಟ್ಟಿರುವ ಸಸಿಗಳನ್ನು ಅವುಗಳ ಪೋಷಣೆ ಮಾಡುವುದಾಗಿ ಪ್ರತಿಜ್ಞೆಗೈದರು. ಸುಪ್ರೀತಾ ಸಂಗಡಿಗರು ಪ್ರಾರ್ಥಿಸಿದರು. ಡಾ. ಮಾಲತೇಶ್ ಪೂಜಾರ ಸ್ವಾಗತಿಸಿ, ಶಿವಕುಮಾರ್ ಬೆಣ್ಣಿ ನಿರೂಪಿಸಿ, ವಂದಿಸಿದರು.