ಬಣ್ಣಗಳ ಮೂಲಕ ಭಾವನೆಗಳು ವ್ಯಕ್ತವಾಗುತ್ತವೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ. ಡಿ.ವಿ. ಪರಮಶಿವಮೂರ್ತಿ
ಹಂಪಿ 19: ಕವಿ ತನ್ನ ಭಾವನೆಗಳನ್ನು ಅಕ್ಷರಗಳ ಮೂಲಕ ವ್ಯಕ್ತಪಡಿಸಿದರೆ, ಚಿತ್ರಗಾರ ಬಣ್ಣಗಳ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಕಲಾವಿದ ರಾಮೇಶ್ ದಿಕ್ಷೀತ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮನುಷ್ಯನ ಹುಟ್ಟಿನಿಂದ ಕಲೆ ಪ್ರಾರಂಭವಾಯಿತು. ಕಲೆಯ ಅಭಿರುಚಿ ಹೊಂದಿರುವ ವ್ಯಕ್ತಿಯ ಮನಸ್ಸು ಸಂಪದ್ಭರಿತವಾಗಿರುತ್ತದೆ. ಕಲೆ ಎಂಬುದು ಎಲ್ಲರಿಗೂ ಬರುವುದಿಲ್ಲ. ಬದುಕಿನ ಜೊತೆಗೆ ಕಲೆ ಬೆರೆತು ವಿಕಾಸ ಹೊಂದುತ್ತದೆ. ಕಲಾವಿದ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಲು ಆಯ್ಕೆ ಮಾಡಿಕೊಂಡಿರುವ ವೇದಿಕೆ ಕಲಾ ಮಾಧ್ಯಮವಾಗಿದೆ. ಇನ್ನೂ ಹಂಪಿಯ ಸುತ್ತಮುತ್ತಲೂ ಆದಿಮಾನವರ ಚಿತ್ರಕಲೆಗಳನ್ನು ನೋಡಲು ಸಾಧ್ಯ. ಕಲಾವಿದ ಚಿತ್ರಕಲೆಯಲ್ಲಿ ಹೊಸ-ಹೊಸ ವಿನ್ಯಾಸ, ಆವಿಷ್ಕಾರವನ್ನು ಆಯ್ಕೆ ಮಾಡಿಕೊಂಡು ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ಸಾಮಾನ್ಯ ಜನರಿಗೆ ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳಬೇಕಾದರೆ ಕಲಾವಿದನ ಮನಸ್ಥಿತಿಯಲ್ಲಿ ನಿಂತು ನೋಡಿದಾಗ ಮಾತ್ರ ಆ ಚಿತ್ರ ನಮಗೆ ಅರ್ಥವಾಗುತ್ತದೆ. ಕಲಾವಿದನಿಗೆ ಕ್ರಿಯಾಶೀಲ ಚಿತ್ರಗಳ ಕಡೆ ಗಮನ ನೀಡಿದರೆ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಕಲಾವಿದ ಕೀರ್ತಿ ಹಿಂದೆ ಬೀಳದೆ ಕೆಲಸವನ್ನು ಮಾಡುತ್ತಾ ಹೋದರೆ ಕೀರ್ತಿ ತಾನಾಗೆ ನಿಮ್ಮ ಹಿಂದೆ ಬರುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಕನ್ನಡ ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗದ ಸಹಕಾರ ಪಡೆದರೆ ಇನ್ನು ಉತ್ತಮ ಸಾಧನೆ ಮಾಡಲು ಅವಕಾಶ ಸಿಗುತ್ತದೆ ಎಂದರು.
ದೆಹಲಿ ಹಿರಿಯ ಕಲಾವಿದ ಸುಧೀರ್ ವ್ಹಿ. ಫಡ್ನೀಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಕಲಾವಿದರಿಗೆ ತಂದೆ-ತಾಯಿಯರ ಪ್ರೋತ್ಸಾಹ ತುಂಬಾ ಮುಖ್ಯವಾಗುತ್ತದೆ. ದೆಹಲಿಯಲ್ಲಿ ಕರ್ನಾಟಕ ಕಲಾ ಪ್ರದರ್ಶನ ಕೇಂದ್ರದಲ್ಲಿ ಕರ್ನಾಟಕದ ಕಲಾವಿದರಿಗೆ ಕಲಾಪ್ರದರ್ಶನಕ್ಕೆ ಉಚಿತ ವ್ಯವಸ್ಥೆ ಇರುತ್ತದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆ.ಎಸ್.ಡಬ್ಲೂ ಸ್ಟೀಲ್ ಲಿಮಿಟೆಡ್ ತೋರಣಗಲ್‌ನ ಹಿರಿಯ ಉಪಾಧ್ಯಕ್ಷರಾದ ಟಿ.ಎಸ್.ಗೌಡ, ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ, ಲಲಿತ ಕಲಾ ನಿಕಾಯದ ಡೀನರಾದ ಡಾ. ಶಿವಾನಂದ ವಿರಕ್ತಮಠ, ಸಂಗಿತ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ್ ಬಡಿಗೇರ, ವಿವಿಧ ನಿಕಾಯದ ಡೀನರು, ಪ್ರಾಧ್ಯಾಪಕರು, ಕಲಾವಿದ ರಾಮೇಶ್ ದಿಕ್ಷೀತ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ. ಮೋಹನ್‌ರಾವ್ ಬಿ. ಪಂಚಾಳ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಚರಿತ್ರೆ ವಿಭಾಗದ ಸಂಶೋಧನಾರ್ಥಿಯಾದ ಮಣಿಕಂಠ ಹಂಗಳ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದೃಶ್ಯಕಲಾ ವಿಭಾದ ಅಧ್ಯಾಪಕರಾದ ಡಾ. ಎಚ್.ಎನ್. ಕೃಷ್ಣೇಗೌಡ ಕಾರ್ಯಕ್ರಮವನ್ನು ವಂದಿಸಿದರು.