ಉದಯೋನ್ಮುಖ ಗ್ರಾಮೀಣ ಪ್ರತಿಭೆ : ರಾಷ್ಟ್ರಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಹೊನ್ನಪ್ಪ ಧರ್ಮಟ್ಟಿ
ಹನಮಂತ ನಾವಿ
ಮಹಾಲಿಂಗಪುರ 16 :ಸಾಧಿಸುವ ಛಲ, ಸತತ ಪರಿಶ್ರಮವಿದ್ದರೆ ಅನುಭವ ಮತ್ತು ಅನುಕೂಲಗಳ ಹಂಗಿಲ್ಲದೇ ಸಾಧಿಸಬಹುದು ಎಂಬುದಕ್ಕೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಮೀಪದ ಮಾರಾಪುರ ಗ್ರಾಮದ ಯುವ ಪ್ರತಿಭೆ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ ರಾಷ್ಟ್ರಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದೇ ಸಾಕ್ಷಿ.
ಬೆಳಗಾವಿ ಜಿಲ್ಲೆ ಚಂದರಗಿ ಕ್ರೀಡಾವಸತಿ ಶಾಲೆಯಲ್ಲಿ ಅ.8ರಂದು ಜರುಗಿದ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್ಶಿಪ್ ಕ್ರೀಡಾಪಟುಗಳ ಆಯ್ಕೆಯ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹೊನ್ನಪ್ಪ ಧರ್ಮಟ್ಟಿ ಭಾಗವಹಿಸಿ 19 ಬಾಲಕರಲ್ಲಿ ಕೇವಲ 1 ನಿಮಿಷ 21 ಸೆಕೆಂಡ್ಗಳಲ್ಲಿ 1.ಕಿ.ಮೀ ದೂರ ಕ್ರಮಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಇದೇ ಅಕ್ಟೋಬರ್ 30ರಿಂದ ನವೆಂಬರ್ 3ರವರೆಗೆ ಜಾಖಂರ್ಡ್ ರಾಜ್ಯದ ರಾಂಚಿಯಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್ಶಿಪ್ ನಡೆಯಲಿವೆ. ಹೊನ್ನಪ್ಪ ಧರ್ಮಟ್ಟಿ ಅವರ ಕ್ರೀಡಾ ಸಾಧನೆಗೆ ಪ್ರೋತ್ಸಾಗ ಮತ್ತು ನೆರವು ನೀಡುವವರು 9731323727 ಸಂಖ್ಯೆಗೆ ಸಂಪರ್ಕಿಸಬಹುದು.
ಅತ್ಯಾಧುನೀಕ ಕ್ರೀಡಾಸೈಕಲ್ ಅವಶ್ಯಕತೆ :
ಹೊನ್ನಪ್ಪ ಚಂದರಗಿ ಕ್ರೀಡಾ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. ಕಳೆದ ಒಂದು ವರ್ಷದಿಂದ ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದಾನೆ. 8ನೇ ತರಗತಿಯಲ್ಲಿದ್ದಾಗ, 2022ರ ಜುಲೈ ತಿಂಗಳಿನಿಂದ ನಮ್ಮ ಮಾರ್ಗದರ್ಶನದಲ್ಲಿ ನಿತ್ಯ 4 ಗಂಟೆ ಕಠಿಣ ಅಭ್ಯಾಸದ ಫಲವಾಗಿ ಕಳೆದ ವರ್ಷವೂ ರಾಷ್ಟ್ರದಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದನು. ರಾಷ್ಟ್ರಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅತ್ಯಾಧುನಿಕ ಕ್ರೀಡಾ ಸೈಕಲ್ ಅಗತ್ಯವಿದೆ. ದಾನಿಗಳು ಪ್ರೋತ್ಸಾಹ ನೀಡಿದರೆ ಮುಂದೆ ಭಾರತದ ಬೆಸ್ಟ್ ಸೈಕ್ಲಿಂಗ್ ರೈಡರ್ ಆಗುತ್ತಾನೆ.
-ಭೀಮಶಿ ವಿಜಯನಗರ.
ಸೈಕ್ಲಿಂಗ್ ತರಬೇತಿದಾರರು.
ಕ್ರೀಡಾ ವಸತಿ ಶಾಲೆ. ಕೆ.ಚಂದರಗಿ.
ಉದಯೋನ್ಮುಖ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ :
ಅತ್ಯಾಧುನಿಕ ಸೈಕಲ್ ಕೊರತೆಯ ನಡುವೆಯೂ 2ನೇ ಬಾರಿ ರಾಷ್ಟ್ರಮಟ್ಟದ ಟ್ರಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಹೊನ್ನಪ್ಪನ ಸೈಕ್ಲಿಂಗ್ ಕ್ರೀಡಾ ಪ್ರತಿಭೆಗೆ ಬೇಕಾದ ಅತ್ಯಾಧುನಿಕ ಕ್ರೀಡಾ ಸೈಕಲ್ ಖರೀದಿಗೆ ನಾನು ವೈಯಕ್ತಿಕ ಧನಸಹಾಯ ನೀಡುತ್ತಿದ್ದೇನೆ. ಕ್ರೀಡಾ ಪ್ರೋತ್ಸಾಹಕರು, ಜನಪ್ರತಿನಿಧಿಗಳು, ಉದ್ಯಮಿಗಳು ಈ ಬಾಲಕನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರಾಷ್ಟ್ರಮಟ್ಟದ ಚಾಂಪಿಯನ್ ಆಗಲು ಸಹಕರಿಸೋಣ.
---ಪ್ರಲ್ಹಾದ ಸಣ್ಣಕ್ಕಿ,
ಗಣ್ಯ ವರ್ತಕರು,
ಮಹಾಲಿಂಗಪುರ.