ಲಿಂಗಾಯತ ತತ್ವಗಳ ಆಚರಣೆಯಿಂದ ಧರ್ಮದ ಪರಿಣಾಮಕಾರಿ ಅನುಷ್ಠಾನ ಸಾಧ್ಯ: ಅಲ್ಲಮಪ್ರಭು ಮಹಾಸ್ವಾಮೀಜಿ
ಲೋಕದರ್ಶನ ವರದಿ
ಬೆಳಗಾವಿ, ಸೆ.19: ಲಿಂಗಾಯತ ಧರ್ಮದ ತತ್ವಗಳನ್ನು ಸರ್ವಸಾಮಾನ್ಯರಿಗೆ ತಿಳಿಸುವುದರ ಜತೆಗೆ, ಲಿಂಗಾಯತ ತತ್ವಗಳ ಆಚರಣೆಯ ಮೂಲಕ ಮಾತ್ರ ಧರ್ಮದ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದು ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿದರು.
ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಜಾಗತಿಕ ಲಿಂಗಾಯತ ಮಹಾಸಭೆಯ ವಾರ್ಷಿಕ ಸರ್ವಸಾಮಾನ್ಯ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗಧಾರಣೆ, ರುದ್ರಾಕ್ಷಿ ಧಾರಣೆ, ಲಿಂಗಪೂಜೆ ಸೇರಿದಂತೆ ಲಿಂಗಾಯತ ಆಚರಣೆಗಳನ್ನು ಪರಿಣಾಮಕಾರಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲಿಂಗಾಯತ ತತ್ವಗಳ ಪರಿಣಾಮಕಾರಿ ಪ್ರಚಾರದ ಮೂಲಕ ಸ್ವತಂತ್ರ ಧರ್ಮದ ವಿರೋಧಿಗಳ ಮನಪರಿವರ್ತನೆ ಹಾಗೂ ವಿರೋಧ ಕಡಿಮೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್, ಅಂತಾರಾಷ್ಟ್ರೀಯ ಬಸವ ಕೇಂದ್ರದ ಕಟ್ಟಡ ನಿರ್ಮಾಣ ಆರಂಭವಾಗಿ 22 ವರ್ಷ ಕಳೆದರೂ ಬಸವಪರ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ?560 ಕೋಟಿ ವೆಚ್ಚದಲ್ಲಿ ಆರಂಭವಾದ ಅನುಭವ ಮಂಟಪದ ಬೃಹತ್ ಕಟ್ಟಡದ ಕಾಮಗಾರಿ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನೀರೀಕ್ಷೆಯಿದೆ. ನಂತರ ಅಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ನಡೆಸಬೇಕು ಎಂಬುದರ ಕುರಿತು ಎರಡು ದಿನಗಳ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.
ಸುಮಾರು 900 ವರ್ಷಗಳ ಹಿಂದೆ ಸ್ಥಾಪನೆಯಾದ ಅನುಭವ ಮಂಟಪದ ಮೂಲ ಉದ್ದೇಶವೇನು ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅಲ್ಲಿ ಯಾವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ನಡೆಯಬೇಕು ಎಂಬುದನ್ನು ಸಭೆ ನಿರ್ಧರಿಸಬೇಕು ಎಂದು ಹೇಳಿದರು.