ಮಹಲಿಂಗಪುರ

ಶಿಕ್ಷಣವೆಂಬುದು ಮೆಕಾಲೆ ಮೈಂಡ್ ಆಗಬಾರದು : ನಾರನಗೌಡ ಉತ್ತಂಗಿ

ಶಿಕ್ಷಣವೆಂಬುದು ಮೆಕಾಲೆ ಮೈಂಡ್ ಆಗಬಾರದು : ನಾರನಗೌಡ ಉತ್ತಂಗಿ

ಮಹಾಲಿಂಗಪುರ 30: ಕಲಿತ ಶಿಕ್ಷಣದಿಂದ ದೇಶಕ್ಕೆ ಮತ್ತು ಸಾಮಾಜಕ್ಕೆ ಏನಾದರೂ ಕೊಡುಗೆಯಾಗದಿರುವಂತಿದ್ದರೆ ಅಂತಹ ಶಿಕ್ಷಣ ವ್ಯರ್ಥ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು. 

ಸ್ಥಳೀಯ ಕೆ ಎಲ್ ಇ ಡಿಪ್ಲೊಮಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಸಂಸ್ಕಾರ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಸಂಸ್ಕಾರದಿಂದ ಮಾತ್ರ ಬದುಕು ಹಸನಾಗಲು ಸಾಧ್ಯ ಹೊರತು ಕೇವಲ ಅಕ್ಷರ ಜ್ಞಾನದಿಂದಲ್ಲ. ಶಿಕ್ಷಣವೆಂಬುದು ಮೆಕಾಲೆ ಮೈಂಡ್ ಆಗಬಾರದು, ಭವ್ಯ ಭಾರತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿಮಾನ ತುಂಬುವುದರೊಂದಿಗೆ ಜಗದ ಪ್ರೀತಿ ಮತ್ತು ಗೌರವ ಗಳಿಸುವ ಸಂಸ್ಕಾರದ ಶಕ್ತಿಯಾಗಬೇಕು. ಗುರು ಹಿರಿಯರನ್ನು ಗೌರವಿಸುವ ದೀಕ್ಷೆಯಾಗಬೇಕು, ದೇಶಕ್ಕಾಗಿ ಬಲಿದಾನಗೈದ ಮಹಾತ್ಮರು ಹಾಗೂ ಅನ್ನದಾತ, ಸೈನಿಕರು,ಶಿಕ್ಷಣ ನೀಡಿದ ಗುರು, ಹೆತ್ತವರನ್ನು ಮೆರೆಸುವ ಮಂತ್ರವಾಗಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಕಲಿಯತ್ತಿರುವಾಗಲೇ ದೇಶದ ಹಿತ ಚಿಂತನೆಯಲ್ಲಿ ತೊಡಗಲು ಪ್ರೇರಣೆಯಾಗಬೇಕು ಎಂದರು.  

ಪ್ರಾಚಾರ್ಯ ಎಸ್‌.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ವಾನ್ ಸರ್ವಥಾ ಪೂಜಿತಃ ಎಂಬ ಮಾತನಂತೆ ವಿದ್ಯೆಯಿಂದ ಮಾತ್ರ ಸರ್ವ ಕಾಲದಲ್ಲೂ, ಸರ್ವ ಸ್ಥಳದಲ್ಲೂ ಸರ್ವರಿಂದ ಗೌರವ ದೊರಕುತ್ತದೆ ಎಂದರು. 

ಇ ಅಂಡ್ ಸಿ ಮುಖ್ಯಸ್ಥೆ ಮಿನಾಜ್ ಅತ್ತಾರ ಮಾತನಾಡಿದರು, ಉಪನ್ಯಾಸಕ ಮಂಜುನಾಥ ಅರಕೇರಿ, ಚೇತನ ಕುಂದರಗಿ, ಸವಿತಾ ಬೀಳಗಿ, ಪ್ರಿಯಾ ಸೋನಾರ್, ಅಂಜನಾ ಮಲಾಜ್ ಇದ್ದರು, ಉಪನ್ಯಾಸಕಿ ನಿರ್ಮಲಾ ಫಕೀರಪುರ ನಿರೂಪಿಸಿದರು. 


ಸುದ್ದಿ ಓದಿ