ಬಳ್ಳಾರಿ

ವರ್ತನೆಯ ಪರಿವರ್ತನೆಯೇ ಶಿಕ್ಷಣ: ಆಲಂಬಾಷಾ

ವರ್ತನೆಯ ಪರಿವರ್ತನೆಯೇ ಶಿಕ್ಷಣ: ಆಲಂಬಾಷಾ

ಬಳ್ಳಾರಿ, ನ.5: ವಿಷಯ ಕಲಿಕೆ, ಅಕ್ಷರ ಜ್ಞಾನವೇ ಶಿಕ್ಷಣವಲ್ಲ. ವ್ಯಕ್ತಿಯಲ್ಲಿ ಸಕಾರಾತ್ಮಕ ವರ್ತನೆಯನ್ನು ತಂದುಕೊಡುವುದೇ ನಿಜವಾದ ಶಿಕ್ಷಣ. ಇಂದು ನಾವು ಸಾಕ್ಷರರನ್ನು ನಿರ್ಮಿಸುತ್ತಿದ್ದೇವೆಯೇ ವಿನಹ ಸುಶಿಕ್ಷಿತರನ್ನಲ್ಲ ಎಂದು ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಆಲಂಬಾಷಾ ನುಡಿದರು. 

ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ,ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 295ನೇ ಮಹಾಮನೆ ಲಿಂ.ರಾವ್ ಬಹದ್ದೂರ್ ವೈ.ಮಹಾಬಲೇಶ್ವರ​‍್ಪ ದತ್ತಿ ಕಾರ್ಯಕ್ರಮದ ಚಿಂತನ ಗೋಷ್ಟಿಯಲ್ಲಿ, ಶರಣರ ಶೈಕ್ಷಣಿಕ ಚಿಂತನೆಗಳು ವಿಷಯದ ಸಮಾರೋಪ ನುಡಿಗಳನ್ನಾಡುತ್ತಾ, ಶರಣರು, ಸಮಾಜದಲ್ಲಿ ಪರಿವರ್ತನೆ ತರಲು ಅರಿವಿನ ಬೆಳಕಿನಲ್ಲಿ ಅನುಭಾವದ ಕಲಿಕೆಯನ್ನು ಜನರಲ್ಲಿ ತಂದರೆಂದರು. ಪ್ರಶಿಕ್ಷಣಾರ್ಥಿಗಳೇ ಚಿಂತನ ಗೋಷ್ಠಿಯ ವಿಷಯ ಮಂಡನೆಯನ್ನು ಮಾಡಿದರು. 

ಶ್ರವಣಕುಮಾರ, ಶರಣರು-ಅನೌಪಚಾರಿಕ ಶಿಕ್ಷಣ ವಿಷಯ ಕುರಿತು ಮಾತನಾಡುತ್ತಾ, ಹಲಗೆ ಬಳಪ ಹಿಡಿಯದೇ ಶರಣರು ಶಿಕ್ಷಣ ಹೊಂದಿ ಸುಶಿಕ್ಷಿತರಾದರು. ಜೀವನಾನುಭವ ಶಿಕ್ಷಣ ಅವರದಾಗಿತ್ತೆಂದು ಅಭಿಪ್ರಾಯಪಟ್ಟರು. ಕುಮಾರಿ ಭಾಗ್ಯಶ್ರೀ ಶರಣರು-ಮಹಿಳಾ ಸಬಲೀಕರಣ ವಿಷಯ ಮಂಡನೆ ಮಾಡಿ, ಪ್ರಪಂಚದಲ್ಲಿಯೇ ಮೊಟ್ಟಮೊದಲಿಗೆ ಸ್ತ್ರೀ ಸಮಾನತೆಯನ್ನು ಸಾಧಿಸಿ ತೋರಿಸಿದವರು ಹನ್ನೆರಡನೇ ಶತಮಾನದ ಶಿವಶರಣರೆಂದರು. 

ಶರಣರು-ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ವಿಷಯ ಕುರಿತು ಮಾತನಾಡಿದ ಶಿಲ್ಪ, ನೈತಿಕತೆಯು ಲೌಕಿಕ ಜೀವನದ ಅಂಗವಾದರೆ, ಆಧ್ಯಾತ್ಮಿಕ ತೆಯು ವ್ಯಕ್ತಿಯ ವೈಯಕ್ತಿಕ ಪ್ರಗತಿಯಾಗಿದ್ದು, ಮಾನವನಿಂದ ಮಹಾ ಮಾನವತ್ವಕ್ಕೇರಿಸಿ, ದೈವೀ ಮಾನವನನ್ನಾಗಿಸುವಂತಹದಾಗಿದೆ ಎಂದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾತ್ಯಾಯನಿ ಮರಿದೇವಯ್ಯನವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗನ್ನು ತಂದು ಕೊಡುವಂತಹದೇ ಶಿಕ್ಷಣವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ ಹಿರೇಮಠರು ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. 

ಪ್ರಶಿಕ್ಷಣಾರ್ಥಿಗಳಾದ ಅಮಿತ್ ಪ್ರಾರ್ಥನೆ ಮಾಡಿದ ಅಥಾವುಲ್ಲ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಧಾತೃಗಳನ್ನು ಪರಿಚಯಿಸಿ, ಶರಣು ಸಮರೆ​‍್ಣ ಮಾಡಿದರು. ಇ.ರುದ್ರೇಶ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ವಿಶ್ರಾಂತ ಉಪನ್ಯಾಸಕಿಯರಾದ ಸುಶೀಲ ಸಿರೂರು, ಬಳ್ಳಾರಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ನೀಲಾಂಬಿಕ, ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ