ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ: ಡಾ. ಚಂದ್ರಶೇಖರ ಕಂಬಾರ
ಬಳ್ಳಾರಿ 28: ನಮ್ಮ ಸಂಸ್ಕೃತವು ತಿಳುವಳಿಕೆ ಭಾಷೆಯಾಗಿದ್ದು, ಇದನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಬೇಕು. ನಮ್ಮ ವಿದ್ಯೆಯನ್ನು ನಾವು ಸಂಸ್ಕೃತ ಭಾಷೆಯಲ್ಲಿ ಇಟ್ಟಿದ್ದೇವೆ. ಆದರೆ ಬ್ರಿಟೀಷರು ಸಂಸ್ಕೃತ ಭಾಷೆಯನ್ನು ಮೂಢನಂಬಿಕೆ ಎಂದರು. ಇದು ನೋವಿನ ಸಂಗತಿಯಾಗಿದ್ದು ವಿದ್ಯೆ ಎಂದರೆ ಕೇವಲ ಆಂಗ್ಲಭಾಷೆಯಲ್ಲ. ರಾಷ್ಟ್ರದ ಪಾರಂಪರಿಕ ಜ್ಞಾನವನ್ನು ಮಾತೃಭಾಷೆಗಳಲ್ಲಿ ಕಲಿತರೆ ಅದನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಎಂದು ನಾಡೋಜ ಡಾ.ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ) ಹಾಗೂ ಕೇಂದ್ರೀಯ ಬುಕಟ್ಟು ವಿಶ್ವವಿದ್ಯಾಲಯ, ಆಂಧ್ರ್ರದೇಶ ಇವರ ಸಹಯೋಗದಲ್ಲಿ ಆಯೋಜಿಸಿದ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆ ಮತ್ತು ಸಮುದಾಯ ಕೇಂದ್ರಿತ ವಿಶ್ವವಿದ್ಯಾಲಯಗಳ ಅಸ್ಮಿತೆಯ ಪ್ರಶ್ನೆಗಳು(ಎನ್ಇಪಿ-2020 ಅನುಲಕ್ಷಿಸಿ) ಎನ್ನುವ ಒಂದು ದಿನದ ರಾಷ್ಟ್ರೀಯ ವೆಬಿನಾರ್ನ್ನು ಉದ್ಘಾಟಿಸಿ ಮಾತನಾಡಿದ ಅವರು ಬ್ರಿಟೀಷರು ಆಂಗ್ಲ ಶಿಕ್ಷಣವನ್ನು ನೀಡುವುದರ ಜೊತೆಗೆ ಎರಡು ಕಲ್ಪನೆಗಳನ್ನು ಕೊಟ್ಟರು. ಇತಿಹಾಸ ಮತ್ತು ಕೀಳಿರಿಮೆಯನ್ನು ಸೃಷ್ಟಿ ಮಾಡಿದರು. ವಿದ್ಯೆಯನ್ನು ಕಲಿಯಬೇಕು ಎಂದರೆ ಅದು ಆಂಗ್ಲ ಭಾಷೆಯಲ್ಲಿ ಮಾತ್ರ ಎನ್ನುವ ಮಟ್ಟದಲ್ಲಿ ಆಂಗ್ಲಭಾಷೆಯ ಒತ್ತಡವನ್ನು ಹೇರಿದರು. ಇದು ದುರಾದೃಷ್ಟಕರ ಸಂಗತಿಯಾಗಿದೆ. ಇಂದು ನಾವೆಲ್ಲರೂ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇಂಗ್ಲಿಷ್ ಇಲ್ಲದೆ ನಮ್ಮ ಜೀವನ ಇಲ್ಲದಂತಾಗಿದೆ ಎನ್ನುವ ಮಟ್ಟಕ್ಕೆ ಬೆಳೆದುನಿಂತಿದ್ದು ಇದು ಆಗಬಾರದು.
ಭಾರತದಲ್ಲ್ಲಿ 35ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಿದ್ದು ನಮ್ಮ ದೇಶದಲ್ಲಿರುವ ದೇಶಿಯ ಜ್ಞಾನ ಸಂಪತ್ತನ್ನು ಪ್ರಾದೇಶಿಕ ಮಾತೃ ಭಾಷೆಗಳಲ್ಲಿ ಶಾಸ್ತ್ರೀಯವಾಗಿ ಬಹುಶಿಸ್ತೀಯ ನೆಲೆಯಲ್ಲಿ ಅವುಗಳನ್ನು ಅಧ್ಯಯನ ಮಾಡಿದರೆ ಕನ್ನಡದ ವಿದ್ವತ್ ವಿಸ್ತಾರವಾಗುತ್ತದೆ. ಹೆಚ್ಚೆಚ್ಚು ಕನ್ನಡದ ಶಕ್ತಿ ಬೆಳೆಯುತ್ತದೆ. ಶಿವರಾಮ ಕಾರಂತರು ಅನ್ಯ ಭಾಷೆಗಳ ಜ್ಞಾನ ಸಂಪತ್ತನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕನ್ನಡದ ಶಕ್ತಿ ಹೆಚ್ಚಾಗಿದೆ. ಪ್ರಮುಖವಾಗಿ ಕುವೆಂಪು ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಇತರೆ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ನೀಡಬೇಕೆಂದು ತಿಳಿಸಿದರು.
ಐಕ್ಯುಎಸಿ ನಿರ್ದೇಶಕ ಡಾ.ಎ.ಮೋಹನ್ ಕುಂಟಾರ್ ಅವರು ವೆಬಿನಾರ್ನ್ನು ನಿರೂಪಿಸಿದರು. ಪ್ರೊ.ವಿ.ಮುರಲೀಧರ ಶರ್ಮ, ಕುಲಪತಿಗಳು, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ, ಡಾ. ಡಿ.ಬಿ.ನಾಯಕ್, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಡಾ.ಬಿ.ಕೆ.ತುಳಸಿಮಾಲಾ, ಕುಲಪತಿಗಳು, ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ, ಡಾ. ನಾಗೇಶ ಬೆಟ್ಟಕೋಟೆ, ಕುಲಪತಿಗಳು, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು, ಡಾ. ಕೆ.ಈ.ದೇವನಾಥನ್, ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು, ಡಾ.ಮನು ಬಳಿಗಾರ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಡಾ.ಪದ್ಮಿನಿ ನಾಗರಾಜು, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ, ಪ್ರೊ.ಹೆಚ್.ಎಸ್.ರಘುನಾಥ, ಸಿಂಡಿಕೇಟ್ ಸದಸ್ಯರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಡಾ.ಕೆ.ಶ್ಯಾಮಲಾ, ಪ್ರಾಧ್ಯಾಪಕರು,ಜಾನಪದ ಮತ್ತು ಬುಡಕಟ್ಟು ಅಧ್ಯಯನ ವಿಭಾಗ, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಡಾ.ಗುರುನಾಥ ಬಡಿಗೇರ, ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಧಾರವಾಡ, ಕನ್ನಡ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.