ಮಹಲಿಂಗಪುರ

ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ : ಪಿಎಸ್‌ಐ ಮಧು

ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ : ಪಿಎಸ್‌ಐ ಮಧು

ಮಹಾಲಿಂಗಪುರ 22: ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ, ಸಾಧನೆ ಅವಕಾಶ ನೀಡಿ. ಬೇಗ ಮದುವೆ ಮಾಡಿ ಅವಳ ಬದುಕನ್ನು ನರಕ ಮಾಡಬೇಡಿ ಎಂದು ಅಪರಾಧ ವಿಭಾಗದ ಪಿಎಸ್‌ಐ ಮಧು ಎಲ್‌. ಹೇಳಿದರು. 

ಸ್ಥಳೀಯ ಟೊಣಪಿನಾಥ ಸಮುದಾಯ ಭವನದಲ್ಲಿ ಬಣಗಜಿಗ ಸಮಾಜದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ತ್ರೀಯಿಂದ ಮಾತ್ರ ಪುರುಷ, ಕುಟುಂಬ ಪರಿಪೂರ್ಣಗೊಳ್ಳುತ್ತದೆ ಹಾಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ ಹೀಗೆ ಸರ್ವ ರಂಗಗಳಲ್ಲೂ ಪುರುಷರಿಗಿಂತ ಒಂದು ಹೆಜ್ಜೆ ಮುಂದಿರುವ ಮಹಿಳೆಯನ್ನು ಗೌರವಿಸಿ ಎಂದರು. 

ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಸವಿತಾ ಅಂಗಡಿ ಮಾತನಾಡಿ, ಇಂದು ಬಣಜಿಗ ಸಮಾಜದ ಮಹಿಳೆಯರು ಹಮ್ಮಿಕೊಂಡಿರುವ ಕಾರ್ಯಕ್ರಮ ಜಾತಿಭೇಧವಲ್ಲ ಬದಲಾಗಿ ಸ್ವಜಾತಿಯ ಸ್ವಾಭಿಮಾನದ ಕಾರ್ಯ ಎಂದರು. 

ಕಾರ್ಯಕ್ರಮದಲ್ಲಿ ಮಹಿಳೆಯರೇ ಅಭಿನಯಿಸಿದ ದಿಬ್ಬಣ ನಾಟಕ ಗಮನಸೆಳೆಯಿತು. ನಾಟಕದಲ್ಲಿ ಮಹಿಳೆಯರೇ ಪುರುಷರಂತೆ ಪಂಚೆ, ಜುಬ್ಬಾ, ಪ್ಯಾಂಟ್, ಶರ್ಟ್‌ ಇತರೆ ವೇಷ ಭೂಷಣ ತೊಟ್ಟು ಒಂದೀಡೀ ಮದುವೆಯ ಸಂಭ್ರಮದ ಹೆಣ್ಣು ನೋಡುವ, ಗಟ್ಟಿ ಮಾಡುವ, ಉಂಗುರ ಹಾಕುವ, ಸೀರೆ ಆರಿಸುವ, ಅರಿಶಿಣ ಕಾರ್ಯ, ಬೀಸುವಕಲ್ಲು, ಒಳಕಲ್ಲು ಪೂಜೆ, ಬಳೆ ತೊಡಿಸುವ, ಎದುರುಗೊಳ್ಳುವುದು ಸೇರಿದಂತೆ ಅದ್ಧೂರಿ ಮದುವೆಯ ಸೊಬಗನ್ನು ಜಾನಪದ ಸೊಗಡಿನ ನೃತ್ಯಗಳ ಸಂಯೋಜನೆಯೊಂದಿಗೆ ಪ್ರಸ್ತುತಪಡಿಸಿ ಮೆರಗು ತಂದರು. 

ಬಣಜಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಹುಕ್ಕೇರಿ ಅಧ್ಯಕ್ಷತೆ ವಹಿಸಿ, ಉಪಾಧ್ಯಕ್ಷೆ ರಂಜನಾ ವಜ್ರಮಟ್ಟಿ, ಸುವರ್ಣಾ ಅಮಲಝರಿ ವೇದಿಕೆ ಮೇಲಿದ್ದರು. ಅನ್ನಪೂರ್ಣ ಮುಂಗರವಾಡಿ ನಿರೂಪಿಸಿದರು. 


ಸುದ್ದಿ ಓದಿ