ಗೃಹಲಕ್ಷ್ಮೀ, ಇಡಿ, ಸಿಬಿಐ ದುರ್ಬಳಕೆಯ ಪ್ರತಿಧ್ವನಿ : ವಿಧಾನಸಭೆಯಲ್ಲಿ ವಿಪಕ್ಷಗಳ ಧರಣಿ, ಕಲಾಪ ಬಲಿ

ಗೃಹಲಕ್ಷ್ಮೀ, ಇಡಿ, ಸಿಬಿಐ ದುರ್ಬಳಕೆಯ ಪ್ರತಿಧ್ವನಿ : ವಿಧಾನಸಭೆಯಲ್ಲಿ ವಿಪಕ್ಷಗಳ ಧರಣಿ, ಕಲಾಪ ಬಲಿ
Echoes of misuse of Grihalakshmi, ED, CBI: Opposition parties stage sit-in in the Assembly, disrupti

ಬೆಳಗಾವಿ : 2 ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ನೀಡಿರುವುದಾಗಿ ಸಚಿವೆ ಹೆಬ್ಬಾಳಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿರುವದು ಹಾಗೂ ಕೇಂದ್ರ ಸರಕಾರ ಆಧಿನದಲ್ಲಿರುವ ಇಡಿ ಮತ್ತು ಸಿಬಿಐ ಸೇರಿದಂತೆ ಕೆಲ ಸಂಸ್ಥೆಗಳನ್ನು ಕೇಂದ್ರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವ ಈ ಎರಡು ವಿಷಯಗಳು ಬುಧವಾರ ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿ ವಿಪಕ್ಷಗಳ ಧರಣಿ, ಸಭಾತ್ಯಾಗದಿಂದ ಸದನ ಮುಂದೂಡಿಕೆಯಿಂದ ಒಂದು ದಿನದ ಕಲಾಪ ಬಲಿಯಾಯಿತು.

    ಬುಧವಾರ ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಆರ್. ಅಶೋಕ ಅವರು ರಾಜ್ಯದ 1 ಕೋಟಿ 26 ಲಕ್ಷ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಜಮಾ ಮಾಡದೆ 5 ಸಾವಿರ ಕೋಟಿ ಹಣವನ್ನು ಅಗಸ್ಟ ತಿಂಗಳವರೆಗೆ ಫಲಾನುಭವಿಗಳಿಗೆ ನೀಡಿರುವುದಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಉತ್ತರ ಕೊಡಿಸುವಂತೆ ಕೇಳಿದರೂ ಉತ್ತರ ಬಂದಿಲ್ಲ. ಸಚಿವೆ ಹೆಬ್ಬಾಳಕರ್ ಸದನಕ್ಕೆ ಗೈರಾಗಿದ್ದಾರೆ. ಉತ್ತರ ಕೊಡಬೇಕಾದ ಸರಕಾರದಿಂದ ಹೀಗಾದರೆ ಸದನ ಯಾಕೆ ನಡೆಸುತ್ತಿರಿ ಎಂದು ತರಾಟೆಗೆ ತೆಗೆದುಕೊಂಡರು. ಹೆಬ್ಬಾಳಕರ್ ಅವರು ಚಂದ್ರಲೋಕದಲ್ಲಿದ್ದರೂ ಕರೆಯಿಸಿ ಉತ್ತರ ಕೊಡಿಸುವಂತೆ ಒತ್ತಾಯಿಸಿದರು.

     ಫಲಾನುಭವಿಗಳಿಗೆ ಸಿಗಬೇಕಾದ ದುಡ್ಡು ಸರಕಾರಕ್ಕೆ ಹೋಗಿದೇಯಾ ಅಥವಾ ಸಚಿವರ ವೈಯಕ್ತಿಕಕ್ಕೆ ಹೋಗಿದೆ. ಹಾಗಾದರೆ ದುಡ್ಡು ಎಲ್ಲಿ ಎಂದು ಆರ್. ಅಶೋಕ ಪ್ರಶ್ನೆ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಶಾಸಕರು ಸಚಿವೆ ಹೆಬ್ಬಾಳಕರ್ ಅವರನ್ನು ಸದನಕ್ಕೆ ಕರೆಸುವಂತೆ, ಉತ್ತರ ಕೊಡಿಸುವಂತೆ ಪಟ್ಟು ಹಿಡಿದು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಸಭಾತ್ಯಾಗ ಮಾಡಿ ಸದನದಿಂದ ಹೊರಹೋದ ಘಟನೆ ಕೂಡಾ ನಡೆಯಿತು. 

   ಬಳಿಕ ಸದನ ಪ್ರಾರಂಭಗೊಂಡಾಗ ಆಗಮಿಸಿದ ಸಚಿವೆ ಹೆಬ್ಬಾಳಕರ್ ಅವರು ಉತ್ತರ ನೀಡಿ, ಫೆಬ್ರುವರಿ, ಮಾರ್ಚ ತಿಂಗಳ ಹಣ ಜಮಾ ಆಗಿರುವದಿಲ್ಲ ಎನ್ನುವದರ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ನುಡಿದರು. ಅಲ್ಲದೆ ಇದರಿಂದ ಯಾರಿಗಾದರೂ ಬೇಸರ ಆಗಿದ್ದರೆ ವಿಷಾಧಿಸುತ್ತೇನೆ ಎಂದರು. ಇದಕ್ಕೆ ಸುಮ್ಮನಾಗದ ವಿಪಕ್ಷಗಳು ಸಚಿವೆ ಹೆಬ್ಬಾಳಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸದನದ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

   ಇದಕ್ಕೆ ಪ್ರತಿಕ್ರಿಯೆಸಿದ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಯಾಕೆ ಹೀಗೆ ಆಯಿತು ಅನ್ನುವದರ ಬಗ್ಗೆ ವಿಚಾರಣೆ ನಡೆಸಿ ಎಂದು ಸೂಚಿಸಿದರು. ಬಳಿಕ ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಪ್ರಿಯಾಂಕ ಖರ್ಗೆ, ಎಚ್.ಕೆಪಾಟೀಲ ಸಮಜಾಯಿಸಿ ನೀಡಲು ಮುಂದಾದರು. ಇದಕ್ಕೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು. ಬಳಿಕ ಸಚಿವೆ ಹೆಬ್ಬಾಳಕರ್ ಉತ್ತರ ನೀಡಿ, ಡಿಬಿಟಿ ಮೂಲಕ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಈಗಾಗಲೆ ದುಡ್ಡು ಹಾಕಲಾಗಿದೆ. ಸದನದ ದಾರಿ ತಪ್ಪಿಸುವ ಕೆಲಸ ಮಾಡಿಲ್ಲ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಸದನಕ್ಕೆ ಕ್ಷಮೆಯಾಚಿಸಿದರು. ಅಲ್ಲದೆ ಓರ್ವ ಮಹಿಳಾ ಸಚಿವೆಗೆ ಈ ರೀತಿ ಮುಗಿ ಬೀಳತಾ ಇದ್ದಿರಿ ಎಂದು ವಿಪಕ್ಷಗಳಿಗೆ ಕಿಚಾಯಿಸಿದರು. 

  ಜನೇವರಿ ಹಣ ನೀಡಿ ಫೆಬ್ರುವರಿ, ಮಾರ್ಚ ತಿಂಗಳ ಹಣ ಯಾಕೆ ನೀಡಿರಲಿಲ್ಲ. ಸರಕಾರ ದೀವಾಳಿಯಾಗಿದೆನಾ ಎಂದು ಶಾಸಕ ಸುನಿಲಕುಮಾರ ಅವರು ಸರಕಾರ ಕಿಚಾಯಿಸಿದರು.

   ಕೇಂದ್ರದಿಂದ ಇಡಿ, ಸಿಬಿಐ ದುರ್ಬಳಕೆ : ಸದನದಲ್ಲಿ ಚರ್ಚೆಗೆ ಅವಕಾಶ ಕೋರಿದ ಶಾಸಕ

    ಬುಧವಾರ ಮಧ್ಯಾಹ್ನ ಸದನ ಪ್ರಾರಂಭವಾಗುತ್ತಿದ್ದಂತೆ ಶೂನ್ಯ ವೇಳೆಯಲ್ಲಿ ಆಡಳಿತ ಪಕ್ಷದ ಶಾಸಕ ಪೊನ್ನಣ್ಣ ಅವರು ಕೇಂದ್ರ ಸಂಸ್ಥೆಗಳಾದ ಇಡಿ, ಸಿಬಿಐ ಸೇರಿದಂತೆ ಕೇಂದ್ರ ಸರಕಾರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದಕ್ಕೆ ದೆಹಲಿ ಹೈಕೋರ್ಟ ನೀಡಿರುವ ನ್ಯಾಶನಲ್ ಹೆರಾಲ್ಡ್ ಪ್ರಕರಣದ ಕೇಸ್ ಆದೇಶ ಸಾಕ್ಷಿಯಾಗಿದೆ. ಇದರ ಕುರಿತು ತನಿಖೆ ನಡೆಸುವ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಪ್ರಸ್ತಾಪಿಸಿದರು.

   ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಬಿಜೆಪಿ ಸದಸ್ಯರು ಇದು ಕೇಂದ್ರ ಹಾಗೂ ಸಂಸತ್ತಿನಲ್ಲಿ ಚರ್ಚೆಯಾಗಬೇಕಾದ ವಿಷಯ ಇಲ್ಲಿ ಚರ್ಚೆಗೆ ಅವಕಾಶ ನೀಡದಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು, ನ್ಯಾಶನಲ್ ಹೆರಾಲ್ಡ್ ಈ ವಿಷಯ ಗಂಭಿರವಾಗಿದೆ. ಕೇಂದ್ರವು ಇಡಿ ಅಂತಹ ಸಂಸ್ಥೆಗಳನ್ನು ಹತ್ತಿಕ್ಕುವ ಕೆಲಸ ಮಾಡಿದೆ. ದೆಹಲಿ ಹೈಕೋರ್ಟ್ ಮಂಗಳಾರತಿ ಮಾಡಿದೆ. ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

    ಇದರಿಂದ ಕೆಂಡಾಮಂಡಲವಾದ ಆರ್. ಅಶೋಕ ಅವರು, ಹೆರಾಲ್ಡ್ ಪತ್ರಿಕೆ ರಾಜ್ಯದಲ್ಲಿ ಹುಟ್ಟಿದಲ್ಲ. ಈ ವಿಷಯ ಸಾರ್ವಜನಿಕ ಅಲ್ಲ. ಇಲ್ಲಿ ಸದನದ ನಿಯಮಾನುಸಾರ ಸದನ ನಡೆಸಿ, ಅದರ ಬಗ್ಗೆ ದೆಹಲಿಗೆ ಹೋಗಿ ಚರ್ಚೆ ನಡೆಸಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಸುನಿಲಕುಮಾರ ಸದನ ದುರುಪಯೋಗ ಮಾಡಬೇಡಿ. ಪೀಠಕ್ಕಿರುವ ಗೌರವವನ್ನು ಕಾಪಾಡಿ, ಖುಶಿಯಿಂದ ನಡೆಸಬೇಡಿ ಎಂದು ಏರುಧ್ವನಿಯಲ್ಲಿ ನುಡಿದರು. ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆದು ಕಲಾಪ ಮುಂದೂಡಲಾಯಿತು. ಇದರಿಂದ ಈ ಎರಡು ವಿಷಯದಲ್ಲಿ ಒಂದು ದಿನದ ಕಲಾಪ ಬಲಿಯಾಯಿತು.   


ಸುದ್ದಿ ಓದಿ