ಸಿಂಧಗಿ

ಸದೃಢ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಅಗತ್ಯ: ಶಿವರಾಯಪ್ರಭು

ಸದೃಢ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಅಗತ್ಯ: ಶಿವರಾಯಪ್ರಭು

ಸಿಂದಗಿ18: ಸಮಾಜವು ಪೌಷ್ಟಿಕ ಆಹಾರದ ಕುರಿತು ಸಮರ್ಪಕವಾಗಿ ಮಾಹಿತಿ ಪಡೆದು ದಿನೋಪಯೋಗಿ ವಸ್ತುಗಳಾಗಿ ಉಪಯೋಗಿಸಿದರೆ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಪ್ರಾದೇಶಿಕ ನಿದೇಶಕ ಶಿವರಾಯಪ್ರಭು ಹೇಳಿದರು. 

ತಾಲೂಕಿನ ಕೆರೂಟಗಿ ಗ್ರಾಮದಲ್ಲಿ ಕಲಕೇರಿ ವಲಯದ ಕೆರೂಟಗಿ ಕಾರ್ಯ ಕ್ಷೇತ್ರದ ಮಲ್ಲಿಗೆ ಜ್ಞಾನ ವಿಕಾಸ ಕೇಂದ್ರ ಹಮ್ಮಿಕೊಂಡ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಪೌಷ್ಟಿಕಾಂಶವಿರುವ ತರಕಾರಿ, ಮೊಳಕೆಬರಿಸಿದ ಕಾಳು ಹಾಗೂ ಹಣ್ಣು ಉಪಯೋಗಿಸಬೇಕು. ಇದರಿಂದ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಬಾಲ್ಯದಲ್ಲೇ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆತರೆ ಮುಂದೆ ಅಪೌಷ್ಟಿಕತೆಯಿಂದ ತುತ್ತಾಗುವ ರೋಗಗಳು ದೂರವಾಗುತ್ತದೆ ಪುಟಾಣಿ ಮಕ್ಕಳಿಗೆ ಅಂಗನವಾಡಿ ಸಹಾಯಕರೇ ಎರಡನೇ ತಾಯಂದಿರಾಗಿರುತ್ತಾರೆ. ಅಂಗನವಾಡಿ ಕೇಂದ್ರಕ್ಕೆ ಸರಕಾರ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿದ್ದು, ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳು ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. 

ಸದೃಢ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಅಗತ್ಯ. ಸತ್ವಯುತ ತರಕಾರಿ, ಹಣ್ಣು ಹಂಪಲನ್ನು ಹೆಚ್ಚು ಬಳಕೆ ಮಾಡುವ ಮೂಲಕ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು. ರಸ್ತೆ ಬದಿಯಲ್ಲಿ ಕತ್ತರಿಸಿಟ್ಟ ಹಣ್ಣು, ತೆರೆದಿಟ್ಟ ಹಾಗೂ ಅತಿಯಾದ ಬೇಕರಿ ತಿಂಡಿ ತಿನಿಸುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆಗಳು ಹೆಚ್ಚಾಗಿದೆ. ತಾಜಾತನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮನೆಯಲ್ಲಿಯೇ ಸಿದ್ದಪಡಿಸಿದ ತಿಂಡಿ ತಿನಿಸುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ವಿಶೇಷವಾಗಿ ಮಕ್ಕಳು ಮತ್ತು ಬಾಣಂತಿಯರು ತೊಪ್ಪಲು ಪಲ್ಲೆ, ತರಕಾರಿ, ಹಾಲು ಮೊಟ್ಟೆಗಳನ್ನು, ಹಣ್ಣು ಹಂಪಲು ಸೇವಿಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು. ಜತೆಗೆ ಲಘು ವ್ಯಾಯಾಮ, ವಾಯುವಿಹಾರ, ಪರಿಶುದ್ಧ ನೀರು ಸೇವನೆ, ಧ್ಯಾನ, ಲಘು ಸಂಗೀತ ಆಲಿಕೆಯಿಂದ ಮಾನಸಿಕ ನೆಮ್ಮದಿ, ಸದೃಢ ಆರೋಗ್ಯ ಕಾಯ್ದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಜನರು ಪ್ರಜ್ಞಾವಂತಿಕೆಯಿಂದ ತಮ್ಮ ಜೀವನ ಶೈಲಿಯನ್ನು ಇಂದಿನ ದಿನಗಳಲ್ಲಿ ಬದಲಿಸಿಕೊಳ್ಳುವದು ಅವಶ್ಯ ಹಾಗೂ ಅನಿವಾರ್ಯವಿದೆ ಎಂದು ಹೇಳಿದರು. 

ನಂತರ ಅವರು ವಿಟಮಿನ್ಸ್‌ಗಳ ಬಗ್ಗೆ ಯಾವ ಯಾವ ಆಹಾರ ಪದಾರ್ಥಗಳಲ್ಲಿ ಯಾವ ವಿಟಮಿನ್ಸ್‌ಗಳು ಇರುತ್ತವೆ, ಹಸಿರು ತರಕಾರಿಗಳಲ್ಲಿ, ಹಣ್ಣು ಹಂಪಲುಗಳ, ಮೊಳಕೆ ಕಾಳುಗಳ ಬಗ್ಗೆ ಮಹಿಳೆಯರು ಮತ್ತು ಮಕ್ಕಳು ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು. 

ಸಂಪನ್ಮೂಲ ವ್ಯಕ್ತಿ ಎಂ.ಡಿ. ಮೋತಿಬಾಯಿ ಮಾತನಾಡಿ, ಜಾಗತೀಕರಣ, ನಗರೀಕರಣ ಮತ್ತು ಆದಾಯದ ಬೆಳವಣಿಗೆಯಿಂದ, ನಮ್ಮ ಆಹಾರ ಪದ್ಧತಿ ಮತ್ತು ಆಹಾರ ಪದ್ಧತಿ ಬದಲಾಗಿದೆ. ಆರೋಗ್ಯಕರ ಆಹಾರವು ಉತ್ತಮ ಜೀವನ ನಡೆಸಲು ಮತ್ತು ರೋಗದ ಅಪಾಯ ಕಡಿಮೆ ಮಾಡಲು ಸಾಕಷ್ಟು, ಸುರಕ್ಷಿತ, ಪೌಷ್ಟಿಕ ಮತ್ತು ವೈವಿಧ್ಯಮಯ ಆಹಾರ ಪದ್ಧತಿ ಅನುಸರಿಸಬೇಕು. ಕೆಲವೊಮ್ಮೆ ಪೌಷ್ಟಿಕ ಆಹಾರವು ದುಬಾರಿಯಾಗಿದೆ. ಅನೇಕ ಜನರಿಗೆ ಕೈಗೆಟುಕುವಂತಿಲ್ಲ ಎಂಬ ಅಂಶವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಹಲವಾರು ಸಾವುಗಳಿಗೆ ಅನಾರೋಗ್ಯಕರ ಆಹಾರವೂ ಮುಖ್ಯ ಕಾರಣ ಎಂಬ ಅಂಶ ಸಂಶೋಧನೆಯಿಂದ ಸಾಬೀತಾಗಿದೆ ಎಂದರು.  

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಚವ್ಹಾಣ, ಜಿಪಂ ಸದಸ್ಯೆ ಕಲ್ಲಮ್ಮ ಬುಳ್ಳಾ, ತಾಲೂಕಿನ ಯೋಜನಾಧಿಕಾರಿ ಗೀರೀಶ ಕುಮಾರ,  ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕಮಲಾ ಸದಾನಂದ ಎಸ್‌. ಒಕ್ಕೂಟದ ಅಧ್ಯಕ್ಷೆ ಚನ್ನಮ್ಮ, ಸೇವಾ ಪ್ರತಿನಿಧಿ ರೇಣುಕಾ, ಕೇಂದ್ರದ ಸದಸ್ಯರು ಭಾಗವಹಿಸಿದ್ದರು. 

ಸಂಘದ ಸದಸ್ಯರು ವಿವಿಧ ಬಗೆಯ ಸೊಪ್ಪು, ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ಪ್ರದರ್ಶಿಸಿದರು. 

ಸುದ್ದಿ ಓದಿ