ಮಹಲಿಂಗಪುರ

ನವದುರ್ಗೆಯರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ.

ನವದುರ್ಗೆಯರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ.

ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಗಳನ್ನು ಒಳಗೊಂಡ ಪರಮಾತ್ಮನಿಂದ ಪ್ರಪಂಚದ ಆಗು ಹೋಗುಗಳು ನಡೆದಿವೆ - ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು  

ಮಹಾಲಿಂಗಪುರ 13 : ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಗಳನ್ನು ಒಳಗೊಂಡ ಪರಮಾತ್ಮನಿಂದ ಪ್ರಪಂಚದ ಆಗು ಹೋಗುಗಳು ನಡೆದಿವೆ, ನಡೆಯುತ್ತಿವೆ, ಮುಂದೆಯೂ ನಡೆಯುತ್ತವೆ ಎಂದು ಶ್ರೀಶೈಲ ಮಹಾ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. 

ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಗುರುವಾರ ನವದುರ್ಗೆಯರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರೆವೇರಿಸಿ ಸದ್ಭಕ್ತರಿಗೆ ಆಶೀರ್ವಚನ ನೀಡುತ್ತಾ, ಅತ್ಯಾಚಾರ, ಅನಾಚಾರ ಎಸಗುವ ರಾಕ್ಷಸರ ಸಂವಾರಗೈದ ಸರ್ವ ಶಕ್ತ ಪರಮಾತ್ಮನ ಪರಿಚಯ ಹಾಗೂ ಅವನ ಅಪಾರ ಶಕ್ತಿಯನ್ನು ಈ ಲೋಕಕ್ಕೆ ಪರಿಚಯಿಸಿದವರಲ್ಲಿ ಮೊದಲಿಗಳು ದುರ್ಗೆಯೇ ಆಗಿದ್ದಾಳೆ. ಆದ್ದರಿಂದ ಪ್ರಸ್ತುತ ನವ ದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆ ಸಮಯೋಚಿತವಾಗಿದೆ ಎಂದರು.  

ಮಹಾಲಿಂಗಪುರ ಸರ್ವ ಧರ್ಮಗಳ ಸಾಮರಸ್ಯದ ಬೀಡು, ಇದಕ್ಕೆ ಪುಷ್ಠಿ ಎಂಬಂತೆ ಪಟ್ಟಣದ ಎಲ್ಲ. ಸಮುದಾಯಗಳು ಕೂಡಿಕ್ಕೊಂಡು ಪ್ರತಿಯೊಂದು ಹಬ್ಬ, ಹರಿದಿನಗಳು, ಪುರಾಣ ಪ್ರವಚನಗಳು ಹಾಗೂ ಇನ್ನಿತರ ಮಂಗಲ ಕಾರ್ಯಗಳನ್ನು ಆಚರಿಸುತ್ತ ಬಂದಿರುವುದರಿಂದಲೆ ಭಾವೈಕ್ಯತೆಗೊಂದು ಮಹತ್ವ ಬಂದಿದೆ. ಈ ಮಾದರಿ ಕಾರ್ಯವು ಹೀಗೆಯೇ ನಿರಂತರವಾಗಿ ನಡೆಯುತ್ತಿರಲಿ ಎಂದು ಆಶೀರ್ವದಿಸಿದರು.  

ರನ್ನ ಬೆಳಗಲಿ ಸಿದ್ಧಾರೂಢ ಮಠದ ಸಿದ್ಧರಾಮ ಶಿವಯೋಗಿಗಳು ಆಶಿರ್ವಚನ ನೀಡಿ ಮಾತನಾಡಿ, ಎಲ್ಲ ಜಾತಿ ಜನಾಂಗಗಳ ಸಿದ್ಧಾಂತಗಳು ಸೇರಿದ ಐಕ್ಯ ಸ್ಥಳವೇ ಮಹಾಲಿಂಗಪುರ ಎಂದರೆ ಅತಿಶಯೋಕ್ತಿಯಲ್ಲ. ಈ ಸಂದರ್ಭದಲ್ಲಿ ನವ ಅವತಾರ ಮೂರ್ತಿಗಳ ಉದ್ಘಾಟನೆ ಮತ್ತು ನವರಾತ್ರಿ ಹಬ್ಬ ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು. 

ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಮಾತನಾಡಿ, ನೂರಾರು ಕಾರ್ಯಕ್ರಮಗಳನ್ನು ಬದಿಗಿಟ್ಟು ನವ ದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆಗೆ ಜಗದ್ಗುರುಗಳು ಆಗಮಿಸಿರುವುದು ನಮ್ಮ ಮಹಾಲಿಂಗಪುರ ಜನತೆಯ ಮೇಲಿಟ್ಟಿರುವ ಅಪಾರ ಪ್ರೇಮದ ಸಂಕೇತವಾಗಿದೆ ಎನ್ನುತ್ತ ಪುರ ಪರವಾಗಿ ಶ್ರೀಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. 

ನವರಾತ್ರಿ ಉತ್ಸವ ಕಮಿಟಿ ಪ್ರಮುಖ ಮಲ್ಲಪ್ಪ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸಮುದಾಯಗಳಿಗೆ ಅಭಿನಂದನೆ ಸಲ್ಲಿಸಿದರು. 

ಇದೆ ಸಮಯದಲ್ಲಿ ಗಿರಮಲ್ಲಪ್ಪ ಬಾಡಿಗಿ ಅವರು ಹೂವಿನಿಂದ ತರಾಜುವನ್ನು ಅಲಂಕೃತಗೊಳಿಸಿ ನಗದು ಸೇರಿದಂತೆ ಶ್ರೀಶೈಲ ಮಹಾ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ತುಲಾಭಾರ ನಡೆಸಿದರು. ವೇದಿಕೆ ಮೇಲೆ ಆಶೀನರಾದ ಶ್ರೀಗಳಾದ ಸಹಜಾನಂದ ಶ್ರೀಗಳು, ಸಿಧ್ಧರಾಮ ಶಿವಯೋಗಿಗಳು, ಸೋಮಶೇಖರಯ್ಯ ಕಂಟಿಕಾರಮಠ, ಮಹಾಲಿಂಗಯ್ಯ ಶಾಸ್ತ್ರಿಗಳನ್ನು ಸನ್ಮಾನಿಸಿ ಆಶಿರ್ವಾದ ಪಡೆದರು. 

ಪಾರ್ವತಿ ಬಾಡಗಿ ಮತ್ತು ಶೀಲಾ ಸೋರಗಾವಿ ಪ್ರಾರ್ಥಿಸಿ ಶಿಕ್ಷಕರಾದ ಹುಮಾಯೂನ್ ಇ. ಸುತಾರ ನಿರೂಪಿಸಿ, ಬಿ ಸಿ.ಪೂಜಾರಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಊರಿನ ಪ್ರತಿ ಸಮುದಾಯದ ಪುರುಷ, ಮಹಿಳಾ ಸದ್ಬಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. 


ಸುದ್ದಿ ಓದಿ