ಉಪಾಧ್ಯಕ್ಷರಾಗಿ ಡಾ. ಬೆಳಗಲಿ ಆಯ್ಕೆ.
ಮಹಾಲಿಂಗಪುರ: ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಸ್ಥಳೀಯ ಖ್ಯಾತ ವೈದ್ಯ ಡಾ. ಎ. ಆರ್. ಬೆಳಗಲಿ ಅವರನ್ನು ಆಯ್ಕೆ ಮಾಡಲಾಗಿದೆ. ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಜಿ. ನಂಜಯ್ಯನಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ದಶಕಗಳಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಕರಾದಿಯಾಗಿ ಒಂದು ದೊಡ್ಡ ಕಾರ್ಯಕರ್ತರ ಪಡೆಯನ್ನು ನಿರ್ಮಿಸಿದ್ದಾರೆ.
ತೇರದಾಳ ವಿಧಾನಸಭಾ ಕ್ಷೇತ್ರದ ಪಟ್ಟಣ, ಹಳ್ಳಿಗಳಿಗೆ ಸಂಚರಿಸಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಮತದಾರರ ಬಾಂಧವರಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಕೊರೋನ ಸಂಕಷ್ಟದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ, ಆಹಾರ, ತರಕಾರಿ, ಗೃಹ ಬಳಕೆಯ ವಸ್ತುಗಳು, ಬಟ್ಟೆಬರೆ, ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನು, ಧನಸಹಾಯ ಸೇರಿದಂತೆ ನಿರಂತರ ಇವರ ಸೇವೆ ಕ್ಷೇತ್ರದ ಜನತೆಗೆ ಅಚ್ಚುಮೆಚ್ಚು.
ಇದನ್ನೆಲ್ಲ ಗಮನಿಸಿರುವ ಕರ್ನಾಟಕ ರಾಜ್ಯ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ವಿಧಾನಸಭೆಯ ಚುನಾವಣೆ ಕೇವಲ ಒಂದೇ ವರ್ಷ ಉಳಿದಿರುವ ಕಾರಣಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಭದ್ರಪಡಿಸುವ ಸಲುವಾಗಿ ಮಾಲಿಂಗಪುರ ಪಟ್ಟಣದ ಖ್ಯಾತ ವೈದ್ಯ ಡಾ. ಬೆಳಗಲಿ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ನೂತನ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಡಾ. ಬೆಳಗಲಿ ಅವರು ಮಾತನಾಡಿ, ನಾನು ಯಾವುದೇ ಹಣ, ಅಧಿಕಾರ, ಪ್ರತಿಷ್ಠೆಗಾಗಿ ಪಕ್ಷದಲ್ಲಿ ಕೆಲಸ ಮಾಡಿದವನಲ್ಲ, ಕೇವಲ ಬಡವರ, ದೀನದಲಿತರ, ಶೋಷಿತರ ಪರವಾಗಿ ಕೆಲಸ ಮಾಡುತ್ತಾ ಬಂದಿರುವುದು, ಇವತ್ತು ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಮತದಾರರ ಬಾಂಧವರು ಹಾಗೂ ಕಾರ್ಯಕರ್ತರು ನನ್ನನ್ನು ಗುರುತಿಸುವಂತಾಗಿದೆ. ಮುಂದೆಯೂ ಪಕ್ಷನಿಷ್ಠೆ ತೋರುತ್ತ ನನ್ನ ಏಳಿಗೆಗೆ ಕಾರಣವಾದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಅವಿರತ ಶ್ರಮಿಸುತ್ತೇನೆ ಎಂದರು.