ವಿಶ್ವಕರ್ಮರು ಶಿಲ್ಪಗಳ ಸೃಷ್ಟಿಕರ್ತರು ಹಿ ಡಾ.ಬಡಿಗೇರ್ ಶಿವಾನಂದಾಚಾರ್
ಲೋಕದರ್ಶನ ವರದಿ
ವಿಶ್ವಕರ್ಮರು ಶಿಲ್ಪಗಳ ಸೃಷ್ಟಿಕರ್ತರು ಹಿ ಡಾ.ಬಡಿಗೇರ್ ಶಿವಾನಂದಾಚಾರ್
ಹಂಪಿ 30: ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ದಿನಾಂಕ 30ನೇ ಅಕ್ಟೋಬರ್ 2024ರಂದು ಪಾಕ್ಷಿಕ ಮಾತು-03ರ ಅಡಿಯಲ್ಲಿ ‘ವಿಶ್ವಕರ್ಮ ಮತ್ತು ಪಂಚಕಸಯಿುಬುಗಳು’ ಎಂಬ ವಿಶೇಷ ಉಪನ್ಯಾಸವನ್ನು ಹೂವಿನ ಹಡಗಲಿಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಬಡಿಗೇರ್ ಶಿವಾನಂದಾಚಾರ್ ಅವರು ಮಂಡಿಸಿದರು.
ವಿಶ್ವಕರ್ಮ, ವಿಶ್ವವನ್ನೇ ಸೃಷ್ಟಿಸಿದವನು, ವಿಶ್ವಕರ್ಮ. ಪಂಚ ಕಸುಬುಗಳ ಮೂಲಕ ಅಂದರೆ, ಕಾಷ್ಠ, ಲೋಹ, ಶಿಲೆ, ಕಂಚು ಮತ್ತು ಚಿನ್ನ ಇವುಗಳ ಮೂಲಕ ದೇವತಾ ಮೂರ್ತಿಗಳು, ಗುಡಿ ಗೋಪುರಗಳು, ರಥ ನಿರ್ಮಾಣ, ಪಲ್ಲಕ್ಕಿ ಉತ್ಸವ ಮೂರ್ತಿಗಳು, ಅಷ್ಟೇ ಅಲ್ಲದೇ ದೇಶದ ಬೆನ್ನೆಲಬು ರೈತನಾಗಿದ್ದರೆ, ರೈತನ ಬೆನ್ನಲುಬು ವಿಶ್ವಕರ್ಮ ಜನಾಂಗದವರಾಗಿದ್ದಾರೆ.
ಇವರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ ಅಪಾರವಾಗಿದೆ. ಹಾಗಾಗಿ ವಿಶ್ವಕರ್ಮರು ಇಂದು ಶಿಲ್ಪಗಳ ಸೃಷ್ಟಿಕರ್ತರಾಗಿದ್ದಾರೆ. ತ್ರೇತಾಯುಗ ಮತ್ತು ದ್ವಾಪರಯುಗದ ಕಾಲದಿಂದ ವಿಶ್ವಕರ್ಮರು ಸೃಷ್ಟಿಸಿದ ಶಿಲೆಗಳು, ವಿಶ್ವವಿಖ್ಯಾತ ಹಂಪಿ, ಲಕ್ಕುಂಡಿ, ಬೇಲೂರು, ಹಳೇಬೀಡು, ಬದಾಮಿ, ಪಟ್ಟದಕಲ್ಲು, ಐಹೊಳೆ, ಶೃಂಗೇರಿ, ಅಜಂತಾ, ಎಲ್ಲೋರ ಇನ್ನೂ ಮುಂತಾದ ಕಡೆಗಳಲ್ಲಿ ಅವರ ಸೂಕ್ಷ್ಮತೆ ಸೂಕ್ಷ ಶಿಲ್ಪಗಳ ಕೆತ್ತನೆಯನ್ನು ಕಾಣಬಹುದಾಗಿದೆ ಎಂದು ಡಾ. ಬಡಿಗೇರ್ ಶಿವಾನಂದಾಚಾರ್ ಪ್ರಬುದ್ಧವಾದ ಉಪನ್ಯಾಸವನ್ನು ನೀಡಿದರು.
ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ತಾರಿಹಳ್ಳಿ ಹನುಮಂತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿಶ್ವವಿಖ್ಯಾತ ಹಂಪಿ, ಲಕ್ಕುಂಡಿ ಇನ್ನು ಮುಂತಾದ ಸ್ಥಳಗಳಲ್ಲಿ ಸೂಕ್ಷ್ಮ ಕೆತ್ತನೆಯ ಶಿಲ್ಪಗಳ ಕರ್ತೃಗಳೆಂದರೆ ವಿಶ್ವಕರ್ಮ ಸಮುದಾಯವೆಂದು ಒತ್ತಿ ಹೇಳಿದರು. ವಿಶ್ವಕರ್ಮ ಸಮುದಾಯ ನಿರ್ಮಿಸಿರುವ ದೇವತಾ ಶಿಲ್ಪಗಳು, ದೇವಾಲಯಗಳು ಇಂದಿಗೂ ಮಾದರಿಯಾಗಿ ಜನಮಾನಸದಲ್ಲಿ ನೀತಿಯುತ ಬದುಕಿಗೆ ಅಚ್ಚಳಿಯದೇ ಉಳಿದಿದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಚಾಲಕರಾದ ಡಾ. ಶಿವರಾಜ ಎಸ್. ಸ್ವಾಗತಿಸಿದರು. ಡಾ. ವಿನಾಯಕ ಜೆ. ನಿರೂಪಿಸಿ, ವಂದಿಸಿದರು.