ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟ ದೊಣ್ಣೆ ಕೀಟದ ಬಾಧೆ : ಇಳುವರಿ ಕುಸಿತದ ಭೀತಿ : ರೈತರ ಗಾಯದ ಮೇಲೆ ಬರೆ
ಪಾರೇಶ ಭೋಸಲೆ
ಬೆಳಗಾವಿ : ಪ್ರಸಕ್ತ ವರ್ಷವು ಜಿಲ್ಲೆಯಲ್ಲಿ ಮಳೆರಾಯ ಕೈಕೊಟ್ಟ ಹಿನ್ನಲೆಯಲ್ಲಿ ರೈತರು ಕಂಗಾಲಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಇವೆಲ್ಲದರ ನಡುವೆ ಈಗ ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬಿನ ಬೆಳೆಗೆ ದೊಣ್ಣೆ ಕೀಟದ ಕಾಟ ಹೆಚ್ಚಾಗಿದ್ದು, ಕಬ್ಬಿನ ಇಳುವರಿ ಕುಸಿತ ಉಂಟಾಗುವ ಪರಿಸ್ಥಿತಿ ಎದುರಾಗಿರುವದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು ಓದುಗರೇ ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗದೆ ಅಲ್ಪ ಪ್ರಮಾಣದಲ್ಲಿ ಮಳೆ ಆಗಿರುವದರಿಂದ ಯಾವದೇ ರೀತಿಯ ಬೆಳೆಗಳು ಬೆಳೆಯದೆ ಜಿಲ್ಲೆಯ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ ಇದರಿಂದ ಬರಗಾಲ ಎದುರಿಸುವ ಪರಿಸ್ಥಿತಿ ತಲೆದೋರಿದೆ. ಅಲ್ಪ ಪ್ರಮಾಣದಲ್ಲಿ ಬಿದ್ದಿರುವ ಮಳೆಯ ಹಾಗೂ ಬಾವಿ, ನದಿಗಳ ಆಶ್ರಯದಿಂದ ಲೋಡ್ ಶೆಡ್ಡಿಂಗ್‌ನ ವಿದ್ಯುತ್ ಅಭಾವದಲ್ಲಿಯೇ ಅಲ್ಪ ಪ್ರಮಾಣದಲ್ಲಿ ಬೆಳೆದಿರುವ ಕಬ್ಬಿನ ಬೆಳೆಗೆ ಕಾಂಡ ಮತ್ತು ಬೇರು ಕೊರೆದು ತಿನ್ನುವ ದೊಣ್ಣೆ ಕೀಟ ತಗುಲಿಕೊಂಡಿದೆ. ಇದರಿಂದ ಅನ್ನದಾತರು ಮತ್ತಷ್ಟು ಸಂಕಷ್ಠದಲ್ಲಿ ಸಿಲುಕಿದ್ದಾರೆ.
ಇವೆಲ್ಲದರ ನಡುವೆ ದೊಣ್ಣೆ ಕೀಟವು ಕಬ್ಬಿನ ಬೇರು ಮತ್ತು ಕಾಂಡವನ್ನು ಕತ್ತರಿಸುತ್ತಿರುವ ಹಿನ್ನಲೆಯಲ್ಲಿ ರೈತರು ಬೆಳೆದ ಕಬ್ಬು ಒಣಗಲು ಆರಂಭವಾಗಿದೆ. ಇದರಿಂದ ರೈತರು ಬೆಳೆದ ಕಬ್ಬಿನ ತೂಕವು ಕಡಿಮೆ ಬರಲಿದೆ. ಅಲ್ಲದೆ ಇಳುವರಿ ಕೂಡಾ ಕಡಿಯಾಗಲಿದೆ ಎನ್ನುವ ಮಾತು ಈಗ ಜಿಲ್ಲೆಯಲ್ಲಿ ದಟ್ಟವಾಗಿ ಕೇಳಿ ಬರತೊಡಗಿದೆ. ಅಲ್ಲದೆ ಕೆಲವು ತಾಲೂಕಿನಲ್ಲಿ ಮಳೆಯು ಬಾರದ ಹಿನ್ನಲೆಯಲ್ಲಿ ಹೊಲಗದ್ದೆಗಳಲ್ಲಿ ಬಿತ್ತಿದ್ದ ಬೀಜಗಳು ಮೊಳಕೆ ಒಡೆಯದೆ ಕಮರಿ ಹೋಗಿದೆ.
ಇವೆಲ್ಲ ಸಮಸ್ಯೆಗಳ ನಡುವೆ ಈಗ ಅಲ್ಪ ಸ್ವಲ್ಪ ಬೆಳೆದು ಬಂದಿದ್ದ ರೈತರ ಕಬ್ಬಿನ ಬೆಳೆಗೆ ದೊಣ್ಣೆ ಹುಳುವಿನ ಬಾಧೆ ತಗುಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಅನ್ನದಾತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆ ಹೆಚ್ಚಾಗಿ ಬಿದ್ದರೂ ಅಥವಾ ಮಳೆಯು ಕಡಿಮೆ ಪ್ರಮಾಣದಲ್ಲಿ ಬಿದ್ದರು ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವ ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ.
ರೈತರು ಬೆಳೆದ ಕಬ್ಬಿನ ಬೆಳೆಗೆ ಜಿಲ್ಲೆಯ ಸಕ್ಕರೆ ಕಾರಖಾನೆಗಳು ಯೋಗ್ಯವಾದ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ ದೊಣ್ಣೆ ಹುಳುವಿನ ಕಾಟದಿಂದ ಕಬ್ಬಿನ ತೂಕದಲ್ಲಿ ಕಡಿಯಾಗಲಿದೆ ಎನ್ನು ಅಂಶವು ಅನ್ನದಾತರಿಗೆ ನಉಂಗಲಾದ ತುತ್ತಾಗಿ ಪರಿಣಮಿಸಿದೆ.