ಲೇಖನಗಳು

ವೃತ್ತಿ, ಸಾಧನೆಯ ಬೆನ್ನ ಹತ್ತಿ ಸಂಬಂಧಗಳ ಮರೆಯಬೇಡಿ

ವೃತ್ತಿ, ಸಾಧನೆಯ ಬೆನ್ನ ಹತ್ತಿ ಸಂಬಂಧಗಳ ಮರೆಯಬೇಡಿ

ಜೀವನ ಪಥದಲ್ಲಿ ಯಾವ ರೀತಿ ವೃತ್ತಿಪರವಾದ ಬೆಳವಣಿಗೆ ಎಷ್ಟು ಮುಖ್ಯವೋ, ಅದೇ ರೀತಿ ಮಾನವೀಯ ಮೌಲ್ಯಗಳು ಜೊತೆಜೊತೆಗೆ ಸಂಬಂಧಗಳ ಅರಿವು, ಕಾಳಜಿಯೂ ಅಷ್ಟೇ ಮುಖ್ಯ. ವೃತ್ತಿ ಸಾಧನೆಗಳ ವಿಚಾರಧಾರಗಳನ್ನು ಇಟ್ಟುಕೊಂಡು ನಮ್ಮೊಡನೆ ಇರುವ ಹಲವಾರು ಸಂಬಂಧಗಳನ್ನು ಮರೆಯುವುದಿರಲಿ, ಕಡೆಗಣಿಸಲೂ ಬಾರದು. ಯಾಕೆಂದರೆ ವೃತ್ತಿಯ ದಾರಿಯು ಅಂಚಿಗೆ ಬಂದಾಗ ಸಂಬಂಧಗಳ ಹಾದಿಯು ನಮ್ಮನ್ನು ಕರೆದೊಯ್ಯುತ್ತದೆ. ಏಕಾಂಗಿಯಾಗಿ, ಅಂತರ್ ಪಿಶಾಚಿಯಾಗಿ ಬೇಸರದ ಜೀವನವನ್ನು ದೂಡುವ ಬದಲು, ಪ್ರೀತಿ ಹಂಚುವ ಸ್ನೇಹಿತರು, ಬಂಧುಗಳು,  ರಕ್ತ ಸಂಬಂಧಿಕರೊಡನೆ ಕಾಲಹರಣ ಮಾಡುವುದೇ ಎಷ್ಟೋ ಲೇಸು.  

ಕೆಲವೊಂದು ಸಲ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ನಮ್ಮವರ ನಡುವೆಯೇ ಅಂತರ ಸಾಧಿಸಿಬಿಡುತ್ತೇವೆ. ಆ ಅಂತರ ಅಪಾರ್ಥವಾಗಿ, ಅಪಾರ್ಥವು ವೈಮನಸ್ಸಾಗಿ, ಕೊನೆಗೆ ಆ ವೈಮನಸ್ಸು ದ್ವೇಷವಾಗಿ ಬಿಡುತ್ತದೆ. ಅತಿಯಾದ ಆತ್ಮೀಯತೆಗೆ ಒಂದು ಮಿತಿ ಇರುವಂತೆ ಅತಿಯಾದ ಅಂತರಕ್ಕೂ ಒಂದು ಮಿತಿ ಇರುತ್ತದೆ. ನಮ್ಮ ಅಹಂಕಾರವನ್ನೇ ನಾವು ನಮ್ಮ ಸ್ವಾಭಿಮಾನವೆಂದು ತಿಳಿಯಬಾರದು.  

ಸಂಬಂಧಗಳಿಗೆ ಸಮಯ ನೀಡುತ್ತಾ ನೀಡುತ್ತಾ ವೃತ್ತಿಯ ಜೀವನಕ್ಕೆ ಸಮಯವನ್ನು ಹಾಳು ಮಾಡಿಕೊಂಡಂತಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಸಂದೇಹವೇ ಇಲ್ಲ ಸಂಬಂಧಗಳಿಗೆ ಸಮಯ ಕೊಡುತ್ತಾ ಹೋದರೆ, ಸಾಧನೆ ಜೀವನದಲ್ಲಿ ನಾವು ಕಟ್ಟಿಕೊಂಡ ಮಹದಾಸೆಯ ಕನಸುಗಳು ಅಪೂರ್ಣವಾಗಿಯೇ ಉಳಿದುಬಿಡುತ್ತವೆ. ಆದರೆ ಸಂಬಂಧಗಳನ್ನು ತ್ಯಜಿಸಿ ಸಾಧಿಸಲು ಹೊರಟರೆ, ಸಂಬಂಧಗಳು ಕೊಡುವ ಜೇನಿನಂತಹ ಸಿಹಿಯನ್ನು ಸವಿಯಲು ಇರುವ ಅವಕಾಶವನ್ನು ನಾವೇ ಸ್ವತಃ ಕಳೆದುಕೊಳ್ಳುತ್ತೇವೆ. ಜೀವನದ ಒಂದು ಘಟ್ಟದಲ್ಲಿ ನಾವು ಎಲ್ಲ ರೀತಿಯ ಸಂಬಂಧಗಳನ್ನು ತ್ಯಜಿಸಲೇಬೇಕು. ಇದು ಅನಿವಾರ್ಯ. ಆದರೆ ಆ ಸಮಯ ಬರುವವರೆಗೆ ಸಂಬಂಧಗಳ, ಸಂಬಂಧಿಕರ,  ಹಿತೈಷಿಗಳ ಜೊತೆಗೆ ಕಷ್ಟವೇ ಆಗಲಿ ಇಷ್ಟವೇ ಆಗಲಿ, ಕಾಲ ಕಳೆಯುವುದು ಉತ್ತಮ. ನಮ್ಮ ಒಂದೇ ಒಂದು ಪ್ರೀತಿಯ ಸಂಭಾಷಣೆ ನಮ್ಮ ಜೊತೆಗಿರುವವರಿಗೆ ಸ್ಪೂರ್ತಿಯಾಗಬಹುದು, ಆತ್ಮಸ್ಥೈರ್ಯ ತುಂಬಬಹುದು, ಜೀವನೋತ್ಸಹ ನೀಡಬಲ್ಲದು. ಕಾರಣ ಕನಿಷ್ಠ ಪಕ್ಷ ನಮ್ಮೊಡನೆ ಇರುವ ಇತರೆ ಜೀವಿಗಳಿಗೆ ಸಮಯ ಕೊಡೋಣ. ಕಾಲಹರಣವೇ ಯಾಕಾಗಬಾರದು? ಒಂಚೂರು ಕಾಲಹರಣ ಮಾಡೋಣ. ಆ ಅಂತರದಲ್ಲಿ ನಾವು ಮುಂದೂಡಿದ ವೃತ್ತಿ, ಸಾಧನೆಯ ಹುರುಪನ್ನು ದ್ವಿಗುಣಗೊಳಿಸಿಕೊಂಡು ಜೀವನದಲ್ಲಿ ಮುಂದೆ ಸಾಗೋಣ, ಕೆಲಸ ಮಾಡೋಣ. ಬಾಂಧವ್ಯ ಬೆಳೆಸದೇ ಇದ್ದರೂ ಮನಸುಗಳ ಮಿಡಿತಗಳಿಗೆ ಸ್ಪಂದಿಸೋಣ. 

- ವಿಶ್ವನಾಥ ಗು ಕರವೀರಮಠ 

            


ಸುದ್ದಿ ಓದಿ