ಮಾದಕ ವಸ್ತುಗಳ ಸಾಗಾಟ ತಡೆಗೆ ಮುಂಡಗೋಡದಲ್ಲಿ ಡಾಗ್ ಸ್ಕ್ವಾಡ್ನಿಂದ ಕೊರಿಯರ್ ಪಾರ್ಸೆಲ್ಗಳ ತಪಾಸಣೆ
ಮಾದಕ ವಸ್ತುಗಳ ಸಾಗಾಟ ತಡೆಗೆ ಮುಂಡಗೋಡದಲ್ಲಿ ಡಾಗ್ ಸ್ಕ್ವಾಡ್ನಿಂದ ಕೊರಿಯರ್ ಪಾರ್ಸೆಲ್ಗಳ ತಪಾಸಣೆ
ಲೋಕದರ್ಶನ ವರದಿ
ಮುಂಡಗೋಡ 16: ಆನ್ಲೈನ್ ಇ-ಕಾಮರ್ಸ್ ಸಂಸ್ಥೆಗಳು ಹಾಗೂ ಕೊರಿಯರ್ ಸೇವೆಗಳ ಮೂಲಕ ಮಾದಕ ವಸ್ತುಗಳ ಸಾಗಾಟ ನಡೆಯುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ಇಲಾಖೆಯು ಮುಂಡಗೋಡ ಪಟ್ಟಣದ ವಿವಿಧ ಕೊರಿಯರ್ ಕಚೇರಿಗಳ ಮೇಲೆ ಡಾಗ್ ಸ್ಕ್ವಾಡ್ ಸಹಿತ ದಿಢೀರ್ ಜಂಟಿ ತಪಾಸಣೆ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಫ್ಲಿಪ್ಕಾರ್ಟ, ಅಮೆಜಾನ್ ಹಾಗೂ ಇತರೆ ಖಾಸಗಿ ಕೊರಿಯರ್ ಸೇವೆಗಳನ್ನು ಬಳಸಿಕೊಂಡು ಡ್ರಗ್ಸ್ ಜಾಲ ಸಕ್ರಿಯವಾಗಿರುವ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆಯು ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಅದರ ಭಾಗವಾಗಿ ಮುಂಡಗೋಡಿನಲ್ಲಿ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ಕೊರಿಯರ್ ಕಚೇರಿಗಳಿಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಹಾಗೂ ಡಾಗ್ ಸ್ಕ್ವಾಡ್ ತಂಡವು, ಕಚೇರಿಗಳಲ್ಲಿದ್ದ ನೂರಾರು ಪಾರ್ಸೆಲ್ಗಳನ್ನು ಜಾಲಾಡಿತು. ಶ್ವಾನ ದಳದ ಸಹಾಯದೊಂದಿಗೆ ಪ್ರತಿಯೊಂದು ಅನುಮಾನಾಸ್ಪದ ಪಾರ್ಸೆಲ್ ಅನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಕೂಲಂಕಷವಾಗಿ ಪರೀಶೀಲನೆಗೆ ಒಳಪಡಿಸಲಾಯಿತು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ಇಂತಹ ದಿಢೀರ್ ತಪಾಸಣೆ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಪಿಎಸ್‌ಐ ಮಂಜುನಾಥ ಗೌಡರ್ ಹೇಳಿದರು.