ವೈದ್ಯರು, ಸಿಬ್ಬಂದಿ ವೇಳಾಪಟ್ಟಿಯಂತೆ ಕಡ್ಡಾಯವಾಗಿ ಹಾಜರಿರಬೇಕು: ಸಿದ್ದು ಸವದಿ
ಮಹಾಲಿಂಗಪುರ: ವೈದ್ಯರು ಮತ್ತು ಸಿಬ್ಬಂದಿಗಳ ಗೈರು ಹಾಜರಿಯಿಂದ ಅವಶ್ಯಕ ಸಿಬ್ಬಂದಿ ಮತ್ತು ಮೂಲಸೌಕರ್ಯಗಳಿದ್ದರೂ ಸಹ ರೋಗಿಗಳ ಕೊರತೆಯಿಂದ ಆಸ್ಪತ್ರೆ ಬಿಕೋ ಎನ್ನುತ್ತಿರುವ ಬಗ್ಗೆ ಅಸಮಾಧಾನಗೊಂಡ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಆಸ್ಪತ್ರೆಯ ಸುಧಾರಣೆಗೆ ವೈದ್ಯರು ಮತ್ತು ಸಿಬ್ಬಂದಿಗಳು ವೇಳಾಪಟ್ಟಿಯಂತೆ ಕಡ್ಡಾಯವಾಗಿ ಹಾಜರಿದ್ದು ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಲೆಕ್ಕಪತ್ರ ಕೊಡುವಲ್ಲಿ ವಿಫಲವಾದ ಕಾರಣ ಕಳೆದ ತಿಂಗಳು ಮುಂದೂಡಿದ್ದ ಸಭೆಯನ್ನು ಮಂಗಳವಾರ ಮಧ್ಯಾಹ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಸಭಾಭವನದಲ್ಲಿ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2020-21 ನೇ ಸಾಲಿನ ಖರ್ಚು-ವೆಚ್ಚಗಳಿಗೆ ಅನುಮೋದನೆ ನೀಡಿ, ತಿಂಗಳಿಗೆ 40-50 ಹೆರಿಗೆ ಮಾಡಿಸುತ್ತಿರುವ ಆಸ್ಪತ್ರೆಯಲ್ಲಿ ಸರ್ವ ಬಡರೋಗಿಗಳಿಗೆ ಈ ಸೌಲಭ್ಯ ಸಿಗಬೇಕು ಅದಕ್ಕಾಗಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಡಿಜಿಟಲ್ ಬೋರ್ಡ್ ಮಾಡಿಸಿ ಸಾರ್ವಜನಿಕರಿಗೆ ಕಾಣುವಂತೆ ತೂಗು ಹಾಕಲು ಸೂಚಿಸಿದರು. ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳ ಸುಲಿಗೆಯಿಂದ ಕಾಪಾಡಲು ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಮೂಲಸೌಕರ್ಯಗಳನ್ನು ಆರೋಗ್ಯ ಸಚಿವರೊಂದಿಗೆ ಮಾತನಾಡಿ ಹೆಚ್ಚಿನ ಅನುದಾನ ಒದಗಿಸುವುದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯಗಳು ಇದ್ದರೂ ಸಹ ವೈದ್ಯರು ಸರಿಯಾಗಿ ಇಲ್ಲದ ಕಾರಣ ರೋಗಿಗಳು ಆಸ್ಪತ್ರೆಯತ್ತ ಬರುತ್ತಿಲ್ಲ, ಬಡವರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ತರಬೇಕಾದ ಸನ್ನಿವೇಶ ಮಹಾಲಿಂಗಪುರದಲ್ಲಿ ಉಂಟಾಗಿದೆ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳು ಆರೋಪಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಮುಖ್ಯ ವೈದ್ಯಾಧಿಕಾರಿ ಸಂಜಯಕುಮಾರ ತೇಲಿ ಮಾತನಾಡಿ, ಆಸ್ಪತ್ರೆಯಲ್ಲಿ ಹೆರಿಗೆ, ಸಂತಾನಹರಣ ಶಸ್ತ್ರಚಿಕಿತ್ಸೆ ಮುಂತಾದ ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.
ತಹಶೀಲ್ದಾರ ಸಂಜಯ ಇಂಗಳೆ, ಮುಖ್ಯ ವೈದ್ಯಾಧಿಕಾರಿ ಸಂಜಯಕುಮಾರ ತೇಲಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪ್ರಕಾಶ ತಟ್ಟಿಮನಿ, ಮಹೇಶ ಚಿಂಚಲಿ, ಮುಖಂಡರಾದ ಮಹಾಲಿಂಗಪ್ಪ ಕುಳ್ಳೊಳ್ಳಿ, ಚನ್ನಬಸು ಯರಗಟ್ಟಿ, ಶಿವು ಅಂಗಡಿ ಮತ್ತು ಡಾ. ಸಿ. ಎಂ. ವಜ್ರಮಟ್ಟಿ, ಡಾ. ವಿಶ್ವನಾಥ ಗುಂಡಾ, ಆಸ್ಪತ್ರೆಯ ಅಧೀಕ್ಷಕ ಮಲ್ಲಿಕಾರ್ಜುನ ಹಟ್ಟಿ, ಸದಾಶಿವ ಉರಬಿನ್ನವರ, ಸಂಗೀತಾ ಹತ್ರೊಟ್ಟಿ ಇತರರು ಇದ್ದರು.