ರೇಬಿಸ್ ರೋಗದ ಕುರಿತು ನಿರ್ಲಕ್ಷ್ಯ ಬೇಡ, ಇರಲಿ ಜಾಗೃತೆ: ಡಾ.ಹನುಮಂತ ನಾವಿ
ಪಾಲಬಾವಿ 22: ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು, ಅಪರಿಚಿತ ಪ್ರಾಣಿಗಳಿಂದ ದೂರವಿರುವುದು ಹಾಗೂ ಪ್ರಾಣಿಗಳೊಂದಿಗೆ ಮಕ್ಕಳು ಎಚ್ಚರಿಕೆಯಿಂದ ವರ್ತಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹಂದಿಗುಂದದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹಣಮಂತ ನಾವಿ ತಿಳಿಸಿದರು.ಅವರು ಸಮೀಪದ ಸುಲ್ತಾನಪುರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 22ರಂದು ವಿದ್ಯಾರ್ಥಿಗಳಿಗಾಗಿ ರೇಬಿಸ್ ರೋಗದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ರೇಬಿಸ್ ರೋಗದ ಹರಡುವಿಕೆ, ಅದರ ಅಪಾಯಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೆ, ಗಾಯವನ್ನು ತಕ್ಷಣ ಸಾಬೂನು ಮತ್ತು ಹರಿಯುವ ನೀರಿನಿಂದ ಕನಿಷ್ಠ 15 ನಿಮಿಷಗಳ ಕಾಲ ತೊಳೆದು, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಹಾಗೂ ಲಸಿಕೆ ಪಡೆಯಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯಗುರು ಎಸ್.ಎನ್.ಬುರ್ಲಟ್ಟಿ, ಭೂದಾನಿಗಳಾದ ಈಶ್ವರ ಪಾಟೀಲ, ಸದಾಶಿವ ಮನೋಜಿ, ಶಿಕ್ಷಕರಾದ ಶಿವಾನಂದ ದುಲಾರಿ, ಸಂಜಯ ಹಿಪ್ಪರಗಿ, ವಿಠ್ಠಲ ಮಾದರ, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.