ವೈವಿಧ್ಯತೆಯೇ ಸಮಾಜದ ಜೀವಂತಿಕೆ: ಶ್ರೀನಿವಾಸಮೂರ್ತಿ
ಬಳ್ಳಾರಿ 16: ಸಮತೆ, ಸಮಾನತೆಯೆಂಬುದು ಕಲ್ಪಿತ ಸತ್ಯವಾಗಿದೆ. ಸಾಕಾರದಲ್ಲಿ ಇದನ್ನು ಕಾಣಲಾಗದು. ಸಮಾನ ಶಕ್ತಿ, ಸಮಾನ ಸಂಪತ್ತು, ಸಮಾನ ವಿದ್ಯೆ, ಇದು ಅಸಾಧುವಾದುದು. ನೈಸರ್ಗಿಕ ಸಂಪನ್ಮೂಲ ಎಲ್ಲರಿಗೂ ದೊರೆಯುವಂತಾಗುವುದೇ ಸಮಸಮಾಜ ನಿರ್ಮಾಣವಾಗಿದೆ. "ಒಂದರೊಳು ಒಂದಿಲ್ಲ, ಒಂದರೊಳು ಕುಂದಿಲ್ಲ, ಒಂದೊಂದು ಅಂದವು ತನತನಗೆ ಚೆಂದ" ಎಂಬ ಕವಿವಾಣಿಯಂತೆ, ವೈವಿಧ್ಯತೆಯೇ ಸಮಾಜದ ಜೀವಂತಿಕೆಯಾಗಿದೆ ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಯು. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ವೀರಶೈವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 251ನೇ ಮಹಾಮನೆ, ಚಿಂತನ ಗೋಷ್ಠಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪರಸ್ಪರ ಅರ್ಥೈಸಿಕೊಳ್ಳುವುದರ ಮೂಲಕ, ಸೋಲು-ಗೆಲುವಿನ, ಹಿರಿ-ಕಿರಿಯ ಸ್ತ್ರೀ ಪುರುಷ, ಭಾವವನ್ನು ಮೀರಿ ವರ್ತಿಸಿದಾಗಲೇ ಸಮಸಮಾಜ ಕಾಣಲು ಸಾಧ್ಯವೆಂದರು. "ಅಲಕ್ಷಿತ ವಚವ ಕಾರ್ತಿಯರು" ಎಂಬ ವಿಷಯದ ಚಿಂತನ ಗೋಷ್ಠಿಯಲ್ಲಿ ಶರಣೆ ಸತ್ಯಕ್ಕನ ಪ್ರಾಮಾಣಿಕ ಕಾಯಕವನ್ನು ಎತ್ತಿ ತೋರಿಸುವ "ಲಂಚ ವಂಚನೆಗೆ ಕೈಯಾನದ ಭಾಷೆ" ಎಂಬ ವಚನದ ಬಗೆಗೆ ಮಾತನಾಡುತ್ತಾ, ಬಾಲಕಿಯರ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ಡಾ. ವೈ.ಕಲ್ಯಾಣಿ ಸತ್ಯಕ್ಕನ ನಿಲುವನ್ನು ಪರಿಚಯಿಸಿದರು.
ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆಶಾರೆಡ್ಡಿ ಅವರು ಗೊಗ್ಗವ್ವೆಯ ಜೀವನವನ್ನು ಪರಿಚಯಿಸುತ್ತಾ ಗಂಡು ಮೋಜಿಸಿ, ಹೆಣ್ಣು ಹಿಡಿದೆಡೆ ಎಂಬ ವಚನದ ಮೂಲಕ ಸ್ತ್ರೀ ಸಮಾನತೆಯನ್ನು ಸಾರಿದ ರೀತಿಯನ್ನು ತಿಳಿಸಿದರು. ವೀರಶೈವ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಆರ್.ಮಂಜುನಾಥ ರವರು ಆಯ್ದಕ್ಕಿ ಲಕ್ಕಮ್ಮನ ಸಿರಿತನಕ್ಕೆ ಸಾಕ್ಷಿಯಾದ ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನ ಎಂಬ ವಚನವನ್ನು ವಿವರಿಸಿದರು.
ಗಣಿ ಉದ್ಯಮಿ ವೈ.ಸತೀಶ್ರ ಪತ್ನಿ ಪ್ರೀತಿ ಸತೀಶ್ ಮತ್ತು ಮಗ ವೈ. ಕಾರ್ತೀಕ್ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ರಾಜಶೇಖರ್ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ವೀರಶೈವ ಮಹಾವಿದ್ಯಾಲಯದ ಸ್ಥಾಪನೆಗೆ ಕಾರಣೀಕರ್ತರಾದ ಲಿಂಗೈಕ್ಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಿ.ಎ. 3ನೇ ವರ್ಷದ ವಿದ್ಯಾರ್ಥಿ ಗುರುಪ್ರಸಾದ್ ಪಂಡಿತ್ ವಚನ ಪ್ರಾರ್ಥನೆ ಮಾಡಿದರು. ಕನ್ನಡ ಉಪನ್ಯಾಸಕಿ ಭ್ರಮರಾಂಭ ಯಾಟಿ ಸ್ವಾಗತ ಕೋರಿದರು. ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ಧಾತೃಗಳನ್ನು ಪರಿಚಯಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಶರಣು ಸಮರ್ಪಣೆ ಮಾಡಿದರು. ಕನ್ನಡ ಉಪನ್ಯಾಸಕಿ ಡಾ. ನೀಲಮ್ಮ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವೇದಿಕೆಯ ಎಲ್ಲಾ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿದ್ದರಾಮ ಮುಳಜೆ, ಡಾ. ವೆಂಕಟಯ್ಯ ಅಪ್ಪಗೆರೆ ಮತ್ತು ಕಾಲೇಜಿನ ಉಪನ್ಯಾಸಕರು, ಬಿ.ಎ. ಕನ್ನಡ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.