ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ರಾಷ್ಟ್ರೀಯ ಲೋಕ ಅದಾಲತ್ ಡಿ.09ರಂದು
ತಾಯಿ, ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಬಳ್ಳಾರಿ,ನ.18: ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿ ಮಹಿಳೆಯರಿಗೆ ಅಗತ್ಯ ಪರೀಕ್ಷೆ ನಡೆಸಿ, ಕಾಲ ಕಾಲಕ್ಕೆ ಸೂಕ್ತ ಲಸಿಕೆ ನೀಡಬೇಕು. ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಂದಿರ ಮರಣವನ್ನು ತಡೆಯುವುದು, ಅನಗತ್ಯ ಗರ್ಭಧಾರಣೆಯನ್ನು ತಡೆಯುವುದು ಅತ್ಯಗತ್ಯವಾಗಿದೆ. ಗರ್ಭಪಾತ ಮತ್ತು ಅಪೂರ್ಣ ಗರ್ಭಪಾತಕ್ಕೆ ಸಂಬಂಧಿಸಿದ ಸಂಭವನೀಯ ತೊಡಕುಗಳ ಬಗ್ಗೆ ಆರೋಗ್ಯ ಸಮುದಾಯವು ತಿಳಿಯಬೇಕು ಎಂದರು.
ಪ್ರಮುಖವಾಗಿ ಗರ್ಭಿಣಿ ತಾಯಿಯ ಸಾವುಗಳು ತೀವ್ರ ರಕ್ತಸ್ರಾವ, ಸೋಂಕುಗಳು, ಅಸುರಕ್ಷಿತ ಗರ್ಭಪಾತ, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಅಸಮರ್ಕ ಹೆರಿಗೆಯಿಂದ ಉಂಟಾಗಲಿದ್ದು, ಇದಕ್ಕೆ ವೈದ್ಯಾಧಿಕಾರಿಗಳು ಎಚ್ಚರವಹಿಸಬೇಕು ಎಂದು ಹೇಳಿದರು.
ಗರ್ಭಿಣಿ ಮಹಿಳೆಯರಿಗೆ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳು ದೂರವಾಗಿದ್ದು, ಕೆಲವು ಅಸಮರ್ಕ ಮತ್ತು ಕಳಪೆ ಗುಣಮಟ್ಟದ ಪ್ರಸವಪೂರ್ವ ಸೇವೆಗಳು ತಾಯಿಯ ಆರೋಗ್ಯ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತವೆ. ಇವುಗಳನ್ನು ತಪ್ಪಿಸಲು ಜಾಗೃತಿ ಮತ್ತು ಅಗತ್ಯ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಕಾಲ ಕಾಲಕ್ಕೆ ಅಗತ್ಯವಾದ ಲಸಿಕೆ ನೀಡಬೇಕು, ಯಾವುದೇ ಗರ್ಭಿಣಿ ಮತ್ತು ಶಿಶುಗಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಹೆರಿಗೆಗಳು ಸಂಭವಿಸಿದಾಗ ಅಲ್ಲಿನ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ಬದಲಾಗಿ ದೂರದ ನಗರದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವಂತಿಲ್ಲ, ಅತ್ಯಂತ ಕಠಿಣ ಪರಿಸ್ಥಿಯಲ್ಲಿ ಮಾತ್ರ ವಿಮ್ಸ್ ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು. ಅಲ್ಲಿನ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಉಳಿದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಬಾಣಂತಿಯರಿಗೆ ಪೌಷ್ಟಿಕ ಆಹಾರದ ಸೇವನೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅಶಾಕಾರ್ಯಕರ್ತೆಯರು ಬಾಣಂತಿಯರ ಕಾಳಜಿ ವಹಿಸಬೇಕು. ಇದರಿಂದ ಬಾಲ್ಯದಲ್ಲಿಯೇ ಶಿಶು ಮರಣ ಸಂಭವಿಸುವ ಸಾಧ್ಯತೆ ಕಡಿಮೆಯಾಗಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು, ಜಿಲ್ಲೆಯಲ್ಲಿ ಸಂಭವಿಸಿದ ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಟಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ವಿಮ್ಸ್ ಪ್ರಸೂತಿ ತಜ್ಞ ಡಾ.ವೀರೆಂದ್ರಕುಮಾರ, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆಯುಷ್ ಅಧಿಕಾರಿ ಡಾ,ಸುಜಾತ ಪಾಟೀಲ. ಸೇರಿದಂತೆ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಶುಶೂಷ್ರಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು.
-------
ಶಿಶುಪಾಲನಾ ಕೇಂದ್ರಗಳು ಗ್ರಾಮೀಣ ಜನರಿಗೆ ವರದಾನ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ನ.18: ರಾಜ್ಯ ಸರ್ಕಾರವು ಆರಂಭಿಸಿರುವ ಶಿಶುಪಾಲನಾ ಕೇಂದ್ರಗಳು ಗ್ರಾಮೀಣ ಭಾಗದ ಜನರಿಗೆ ವರದಾನವಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ, ಬಳ್ಳಾರಿ ಇವರ ಸಹಯೋಗದೊಂದಿಗೆ ತಾಫಂ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಶಿಶು ಪಾಲನ ಕೇಂದ್ರಗಳ ಮಕ್ಕಳ ಹಾರೈಕೆದಾರರಿಗೆ (ಕೇರ್ಟೇಕರ್ಸ್) ತರಬೇತಿಗೆ” ಚಾಲನೆ ನೀಡಿ ಅವರು ಮಾತಮಾಡಿದರು.
ಗ್ರಾಮೀಣ ಭಾಗದ ಬಡ ಕುಟುಂಬಗಳ ಮಕ್ಕಳ ಆರೈಕೆಗೆ ಸರ್ಕಾರ ಜಾರಿಗೆ ತಂದಿರುವ ಶಿಶುಪಾಲನ ಕೇಂದ್ರಗಳು ಗ್ರಾಮೀಣ ಜನರ ಪಾಲಿಗೆ ವರದಾನವಾಗಲಿದೆ. ಆದರೆ ಕೇಂದ್ರಗಳನ್ನು ನಿರ್ವಹಿಸುವವರು ಮತ್ತು ಮಕ್ಕಳನ್ನು ಆರೈಕೆ ಮಾಡುವವರು ಸೂಕ್ತ ತರಬೇತಿ ಪಡೆಯಬೇಕು ಎಂದು ಕರೆ ನೀಡಿದರು.
ಶಿಶು ಪಾಲನಾ ಕೇಂದ್ರದಲ್ಲಿ ಮಕ್ಕಳ ಆರೈಕೆದಾರರು ತಮ್ಮ ಮಕ್ಕಳಂತೆ ಇತರರ ಮಕ್ಕಳನ್ನು ಆರೈಕೆ ಮಾಡಬೇಕು. ಮನೆಯ ಮೊದಲು ಗುರು ತಾಯಿಯಾದರೆ, ಎರಡನೇ ಗುರು ಅಂಗನವಾಡಿ ಸಹಾಯಕರಾಗಿದ್ದರು. ಇದೀಗ ಎರಡನೇ ಗುರು ಶಿಶು ಪಾಲನಾ ಕೇಂದ್ರದ ಆರೈಕೆದಾರರಾಗಲಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ವಿಜಯ್ಕುಮಾರ್, ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯ್ಕ್.ಎಂ, ತಾಲ್ಲೂಕು ಪಂಚಾಯತ್ ಇಒ ಮಡಗಿನ ಬಸಪ್ಪ, ಜಿಲ್ಲಾ ಪಂಚಾಯತಿಯ ಸಹಾಯಕ ನಿರ್ದೇಶಕ ಬಸವರಾಜ್ ಹಿರೇಮಠ ಸೇರಿದಂತೆ ಮಹಿಳಾ ಮೇಲ್ವಿಚಾರಕೀಯರು, ತರಬೇತಿದಾರರು, ಶಿಬಿರಾರ್ಥಿಗಳು, ತಾಲ್ಲೂಕು ಐ.ಇ.ಸಿ ಸಂಯೋಜಕರು ಮತ್ತು ತಾಲ್ಲೂಕು ಪಂಚಾಯತಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
------
ಬಳ್ಳಾರಿ,ನ.18: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇವರ ಆದೇಶದಂತೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಡಿ.09 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಚೇರಿಯಲ್ಲಿ ನಡೆಯಲಿದೆ.
ಅದಾಲತ್ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಉಭಯ ಪಕ್ಷಗಾರರು ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾಮುವಿ: ಐಎಎಸ್ ಕೆಎಎಸ್ ಪರೀಕ್ಷೆಗಳಿಗೆೆ ತರಬೇತಿ
ಬಳ್ಳಾರಿ,ನ.18: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತಿದ್ದು, ಅರ್ಹ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬಹುದು.
ಆಸಕ್ತರು ನ.24 ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂ.0821-2515944 ಗೆ ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವ ಪ್ರೊ. ಕೆ.ಎಲ್.ಎನ್ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.