ಮುಂಗಾರು ಹಂಗಾಮಿಗಾಗಿ ರೈತರಿಗೆ ಬೀಜಗಳ ವಿತರಣೆ
ಲೋಕದರ್ಶನ ವರದಿ
ಯರಗಟ್ಟಿ 30 : ಕೃಷಿ ವಿಜ್ಞಾನಿಗಳಿಂದ ಸಂಸ್ಕರಿಸಿದ ಉತ್ತಮ ಬೀಜಗಳನ್ನು ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ವಿತರಿಸಲಾಗುತ್ತದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಹೇಳಿದರು. 2026-27 ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಕೃಷಿ ಇಲಾಖೆಯಿಂದ ಸರ್ಕಾರಿ ಸಹಾಯ ಧನದಲ್ಲಿ ನೀಡುತ್ತಿರುವ ಬೀಜ ವಿತರಣಾ ಕಾರ್ಯಕ್ರಮಕ್ಕೆ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಭಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಸಲ ಹೆಸರು, ಉದ್ದ, ಗೋವಿನ ಜೋಳ ಬೀಜಗಳ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಯಾವುದೇ ಕಾರಣಕ್ಕೆ ಬೀಜದ ಕೊರತೆಯಾಗದು. ಈ ಭಾರಿ ವಾಡಿಕೆಗಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಇದ್ದು ರೈತರು ತೇವಾಂಶವನ್ನು ನೋಡಿಕೊಂಡು ಬಿತ್ತನೆ ಮಾಡಬೇಕು.
ಅಲ್ಲದೇ ಕಬ್ಬು ಬೆಳೆಗಾರರು ಸಹ ಮಳೆಯ ಪ್ರಮಾಣ ಮತ್ತು ಅಂತರ್ಜಲಮಟ್ಟವನ್ನು ನೋಡಿಕೊಂಡು ನೀರಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ರಾಸಾಯನಿಕ ಗೋಬ್ಬರದ ಬಳಕೆಯನ್ನು ಕಡೆಮೆ ಮಾಡಿ ಲಾಭದಾಯಕ ಕೃಷಿ ಪದ್ಧತಿಯನ್ನು ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಸೀಲ್ದಾರ ಎಂ.ವಿ. ಗುಂಡಪ್ಪಗೋಳ ಮಾತನಾಡಿ, ಸರ್ಕಾರದಿಂದ ವಿತರಿಸಲಾಗುವ ಬೀಜಗಳನ್ನು ಪಡೆದ ರೈತರು ಕೃಷಿ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಲಹೆ ಪಡೆದು ಬಿತ್ತನೆ ಮಾಡಬೇಕು ಎಂದರು. ಮುನವಳ್ಳಿಯ ಶ್ರೀ ಪಂಚಲಿಗೇಶ್ವರ ರೈತ ಉತ್ಪಾದಕ ಸಂಘದಿಂದ ಬೀಜ ವಿತರಿಸಲಾಯಿತು. ಎಪಿಎಂಸಿ ಅಧ್ಯಕ್ಷ ನಿಲಕಂಠ ಸಿದ್ದಬಸನ್ನವರ, ಆರ್.ಕೆ. ಪಟಾತ, ಸೋಮು ರೈನಾಪುರ, ಯಲ್ಲನಾಯ್ಕ ನಾಯ್ಕರ, ಕೃಷಿ ಅಧಿಕಾರಿಗಳಾದ ಎಸ್.ಎಲ್. ದೇಸಾಯಿ, ಎನ್.ಜಿ. ಕಳಸಪ್ಪನವರ, ಉಮೇಶ ಯರಗಟ್ಟಿ, ಮನೋಹರ ದಿನ್ನಿಮನಿ ಇತರರು ಇದ್ದರು.