ರೋಗನಿರೋಧಕ, ಶಕ್ತಿ ವರ್ಧಕ ಓಷಧಿಗಳ ಕಿಟ್ಗಳ ವಿತರಣೆ
ಲೋಕದರ್ಶನ ವರದಿ
ಮಹಾಲಿಂಗಪುರ 16: ಕಾರ್ಮಿಕರ ಸದೃಢ ಆರೋಗ್ಯಕ್ಕಾಗಿ ಆಯುಷ್ಯ ಇಲಾಖೆ ಅನೇಕ ರೀತಿಯ ಓಷಧಗಳನ್ನು ಮತ್ತು ಕಾರ್ಮಿಕ ಇಲಾಖೆ ಪ್ರತಿರಕ್ಷಣಾ ಸಾಮಗ್ರಿಗಳನ್ನೂ ಕೂಡ ನೀಡಿದೆ ಇವುಗಳನ್ನು ಆರೋಗ್ಯ ಇಲಾಖೆಯ ಮಾರ್ಗದರ್ಶನಗಳೊಂದಿಗೆ ಉಪಯೋಗಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಸಿ.ಎಂ. ವಜ್ಜರಮಟ್ಟಿ ಹೇಳಿದರು.
ಕಟ್ಟಡ ಕಾರ್ಮಿಕ ಮತ್ತು ಕಾರ್ಮಿಕರ ಕಲ್ಯಾಣ ಸಂಘದ ವತಿಯಿಂದ ಕಾರ್ಮಿಕ ಇಲಾಖೆ ನೀಡಿರುವ 400ಕ್ಕೂ ಹೆಚ್ಚು ಪ್ರತಿರಕ್ಷಣಾ ಕಿಟ್ ಮತ್ತು ಆಯುಷ್ಯ ಇಲಾಖೆ ನೀಡಿರುವ ರೋಗನಿರೋಧಕ ಹಾಗೂ ಶಕ್ತಿ ವರ್ಧಕ ಓಷಧಿಗಳ ಕಿಟ್ಗಳ ವಿತರಣಾ ಕಾರ್ಯಕ್ರಮ ಬುಧವಾರ ಮುಂಜಾನೆ ಮಾದರ ಚೆನ್ನಯ್ಯ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕರು ಪರಿಶ್ರಮಿಗಳು ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಪರಿವಾರವನ್ನು ಸಲುಹುವ ದೊಡ್ಡ ಜವಾಬ್ದಾರಿ ಇವರ ಮೇಲಿರುತ್ತದೆ. ಆದ್ದರಿಂದ ಮಾರ್ಕೆಟ್ ಅಂದಾಜು ಮೊತ್ತ 3ಸಾವಿರ ರೂಗಳ ಓಷಧಿಗಳನ್ನು ಸರ್ಕಾರ ತಮಗಾಗಿ ನೀಡುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಓಷಧಿಗಳ ಗುಣಧರ್ಮಗಳನ್ನು ಬಿಡಿಬಿಡಿಯಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರು ಹಾಗೂ ವೈದ್ಯರಾದ ಡಾ.ಎ.ಆರ್.ಬೆಳಗಲಿ ಮಾತನಾಡಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಎಲ್ಲ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿರುವ ಸಂಘವು ಸರ್ಕಾರದ ಕಾರ್ಮಿಕ ಇಲಾಖೆ ಮಟ್ಟದಲ್ಲಿ ಸಿಗುವ ಸೌಲಭ್ಯಗಳನ್ನು ನೇರವಾಗಿ ಕಾರ್ಮಿಕರಿಗಾಗಿ ಮುಟ್ಟಿಸುವ
ಪ್ರಾಮಾಣಿಕ ಕಾರ್ಯವನ್ನು ಸೇತುವೆಯಂತೆ ನಿರ್ವಹಿಸುತ್ತಿದ್ದಾರೆ ಮತ್ತು ಇಲ್ಲಿ ಕಾರ್ಮಿಕರ ಪರವಾಗಿ ಸೇವೆ ಸಲ್ಲಿಸುತ್ತಿರುವವರು ಸಹ ಬಡ ಕಾರ್ಮಿಕರೇ ಆಗಿದ್ದಾರೆ. ಆದ್ದರಿಂದ ಸಂಘಟನೆಯ ಅಭಿವೃದ್ಧಿಗಾಗಿ ಎಲ್ಲರೂ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಘದ ರಾಜ್ಯ ಕಾರ್ಯದರ್ಶಿ ಸದಾಶಿವ ಪೂಜಾರಿ ಮಾತನಾಡಿ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ತಮ್ಮ ಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು, ಸರ್ಕಾರ ಪ್ರತಿರಕ್ಷಣಾ ಕಿಟ್ಟ್ ಮತ್ತು ಆಯುಷ್ಯ ಇಲಾಖೆಯ ವಿವಿಧ ರೀತಿಯ ಓಷಧಗಳನ್ನು ನೀಡುತ್ತಿದೆ, ಕಾರ್ಮಿಕ ಬಂಧುಗಳು ಇವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಳಿ ಹೇಳಿದರು.
ಸಮಾರಂಭದ ಆರಂಭದಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ ಖ್ಯಾತ ಹಿಂದಿ ಚಲನಚಿತ್ರ ಹಿನ್ನೆಲೆ ಗಾಯಕಿ ದಿ. ಲತಾ ಮಂಗೇಶ್ಕರ್ ಮತ್ತು ಕನ್ನಡದ ಕಬೀರ ಪದ್ಮಶ್ರೀ ದಿ. ಇಬ್ರಾಹಿಂ ಸುತಾರ್ ಅವರಿಗೆ ಒಂದು ನಿಮಿಷದ ಮೌನ ಆಚರಿಸಿ ದಿವಂಗತರಿಗೆ ಗೌರವ ಸೂಚಿಸಲಾಯಿತು. ಇತ್ತೀಚಿಗೆ ನೂತನ ಮಹಾಲಿಂಗಪುರ ಘಟಕದ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಹೇಶ ಆರಿ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ರೈತ ಸಂಘದ ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮತ್ತು ಪತ್ರಕರ್ತ ಜಯರಾಮ್ ಶೆಟ್ಟಿ ಮಾತನಾಡಿದರು. ವೇದಿಕೆ ಮೇಲೆ ಸಂಘದ ರಾಜ್ಯಾಧ್ಯಕ್ಷ ಪರಶುರಾಮ್ ಮೇತ್ರಿ, ಪಟ್ಟಣ ಪ್ರಮುಖರಾದ ಈರ್ಪ ದಿನ್ನಿಮನಿ, ಅರ್ಜುನ ದೊಡಮನಿ, ಸಿರಾಜ ಮುಜಾವರ, ಪ್ರಶಾಂತ ಮುಖ್ಯನವರ್, ಲಕ್ಷ್ಮಣ ಮಾಂಗ, ಜಯರಾಜ ಗಸ್ತಿ,, ವಿಠ್ಠಲಗೌಡ ಕುಳಲಿ, ಸೈಯದ ನದಾಫ್, ಮಹಾಲಿಂಗಪ್ಪ ಭಜಂತ್ರಿ, ನಾಗೇಶ ಭಜಂತ್ರಿ, ತುಕಾರಾಮ ಮಾದರ, ಎಮ್. ಡಿ ಆನಂದ, ಪತ್ರಕರ್ತ ಎಸ್ ಎಸ್ ಈಶ್ವರ್ಪಗೋಳ ಉಪಸ್ಥಿತರಿದ್ದರು. ಭೀಮಶಿ ಮಾವಿನಹಿಂಡಿ ಸ್ವಾಗತಿಸಿ, ಬಸವರಾಜ ಮಾವಿನಹಿಂಡಿ ನಿರೂಪಿಸಿ, ಚೆನ್ನಪ್ಪ ಮೇತ್ರಿ ವಂದಿಸಿದರು.